ಪಡಿತರ ಚೀಟಿ ಸಮಸ್ಯೆ ನಿವಾರಿಸಲು ಸಚಿವ, ಜಿಲ್ಲಾಧಿಕಾರಿಗೆ ಮನವಿ
ಕಾರವಾರ, ಸೆ.4: ಪಡಿತರ ಚೀಟಿಯಿಂದಾಗುವ ತೊಡಕುಗಳನ್ನು ನಿವಾರಿಸಿ ಸಮರ್ಪಕವಾಗಿ ಪಡಿತರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಪಡಿತರ ಚೀಟಿ ಸೇವಾ ಕೇಂದ್ರ ಹಿತರಕ್ಷಣಾ ವೇದಿಕೆಯ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಗೆ ಶನಿವಾರ ಮನವಿ ಸಲ್ಲಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿ ಬಯೋ ಸೇವಾ ಕೇಂದ್ರ ನಡೆಸುತ್ತಿರುವ ಹಲವು ಏಜೆನ್ಸಿಗಳಿಗೆ ಸರಕಾರದ ಹೊಸ ನೀತಿಯಿಂದ ತೊಂದರೆಯಾಗಿದೆ. ಹಿಂದಿನಿಂದಲೂ ತಾತ್ಕಾಲಿಕ, ಖಾಯಂ ಕಾರ್ಡ್ ನೀಡುವಿಕೆ, ಪಡಿತರ ಕಾರ್ಡ್ ತಿದ್ದುಪಡಿ ನವೀಕರಣದಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದು, ಸದ್ಯ ಸರಕಾರ ಟೋಕನ್ ಪಡೆಯುವ ಪದ್ಧ್ದತಿಯನ್ನು ಜಾರಿಗೆ ತಂದಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಏಜೆನ್ಸಿಯವರಿಗೆ ತೊಂದರೆಯಾಗುತ್ತಿದ್ದು, ಇದನ್ನು ನಿಲ್ಲಿಸಿ ಮೊದಲಿನ ಪದ್ಧ್ದತಿಯನ್ನೇ ಅನುಸರಿಸಬೇಕು. ಹೊಸ ಪದ್ಧ್ದತಿಯಲ್ಲಿ ಟೋಕನ್ ವಿತರಣೆಗೆ ಸರ್ವರ್ ಸಮಸ್ಯೆ ಎದುರಾಗಿದೆ. ಬಡ ಜನರಿಗೆ ಇದು ತೀರಾ ತೊಂದರೆ ನೀಡುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಹಲವು ಕಷ್ಟಗಳ ನಡುವೆಯೂ ಏಜೆನ್ಸಿಗಳು ಸರಕಾರದ ಕೆಲಸವನ್ನು ಮಾಡುತ್ತಲಿದ್ದು, ಇದರಿಂದ ಗಳಿಕೆಯ ಬದಲು ನಷ್ಟವೇ ಅಧಿಕವಾಗುತ್ತಿದೆ. ಗ್ರಾಹಕರಿಂದಲೂ ಬೈಸಿಕೊಳ್ಳುವ ಪ್ರಸಂಗ ಎದುರಾಗುತ್ತಿದೆ ಎಂದು ವಿವರಿಸಿದರು.
ಟೋಕನ್ ನೀಡುವ ಪದ್ಧತಿಯನ್ನು ವಿವರಿಸುವುದಾದರೆ, ಪ್ರತಿ ಟೋಕನ್‌ಗೆ 20 ರೂ.ನಂತೆ ಏಜೆನ್ಸಿಯವರ ಖಾತೆಗೆ ನೇರವಾಗಿ 5ನೆ ತಾರೀಕಿನ ಒಳಗೆ ಹಣ ಪಾವತಿಸಬೇಕು. ಸರ್ವರ್ ಸಮಸ್ಯೆಯನ್ನು ಬಗೆಹರಿಸಿ ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು. ಸಂಘಟನೆ ಅಧ್ಯಕ್ಷ ವಿರೂಪಾಕ್ಷ ನಾಯ್ಕ, ಕಾರ್ಯದರ್ಶಿ ರಾಜಶೇಖರ ಬೆಳ್ಳಿಗಟ್ಟಿ, ಪ್ರಮುಖರಾದ ಸತ್ಯಾ ಪತ್ತಾರ, ಪ್ರಕಾಶ ಕಟ್ಟಿಮನಿ, ಕುಮಾರ ಪಾವಸ್ಕರ್, ಶ್ರೀಧರ ನಾಯ್ಕ ಹಾಜರಿದ್ದರು.







