ಕೊಲೆ ಪ್ರಕರಣ: ಆರೋಪಿ ವಶಕ್ಕೆ
ಸಾಗರ, ಸೆ. 4: ವ್ಯಕ್ತಿಯೊಬ್ಬನ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಶನಿವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಜೋಗ ರಸ್ತೆಯ ಟಿಪ್‌ಟಾಪ್ ಕಲ್ಯಾಣ ಮಂಟಪದ ಪಕ್ಕದ ರಸ್ತೆಯ ಬದಿಯಲ್ಲಿ ದಿನಾಂಕ 16-4-2015ರ ರಾತ್ರಿ ಕಲ್ಲಂಗಡಿ ಹಣ್ಣಿನ ಅಂಗಡಿ ಮಾಲಕ ಎಸ್.ಎನ್.ನಗರ ನಿವಾಸಿ ಮುಹಮ್ಮದ್ ಯೂನುಸ್ (20) ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಕಲ್ಲಂಗಡಿ ಹಣ್ಣಿನ ರಾಶಿಯೊಳಗೆ ಮುಚ್ಚಿ ಹಾಕಿದ್ದ ಘಟನೆಗೆ ಸಂಬಂಧಪಟ್ಟಂತೆ ಹಿರೇಕೆರೂರು ತಾಲೂಕಿನ ಹಂಸಬಾವಿಯ ಕುಂಬಾರ ಓಣಿ ನಿವಾಸಿ ಜಮೀವುಲ್ಲಾ ಮಕಂದರ್ ಯಾನೆ ಜಬ್ಬಿ ಅವರನ್ನು ಬಂಧಿಸಲಾಗಿದೆ. ಮುಹಮ್ಮದ್ ಯೂನುಸ್ ಹಾಗೂ ಜಮೀವುಲ್ಲಾ ಇಬ್ಬರೂ ಸಂಬಂಧಿಕರಾಗಿದ್ದರು. ಯೂನುಸ್ ತನ್ನ ಅಂಗಡಿಯಲ್ಲಿ ಜಮೀವುಲ್ಲಾನನ್ನು ಕೆಲಸಕ್ಕೆ ಇರಿಸಿಕೊಂಡಿದ್ದ. ದಿನಾಂಕ 16-04-2015ರ ರಾತ್ರಿ ಜಮೀವುಲ್ಲಾನನ್ನು ಯೂನುಸ್ ಬೈದಿದ್ದಾನೆ ಎನ್ನಲಾಗಿದೆ. ಇದರಿಂದ ಜಮೀವುಲ್ಲಾ ಕೋಪಗೊಂಡಿದ್ದು, ರಾತ್ರಿ ಮುಹಮ್ಮದ್ ಯೂನುಸ್ ಮಲಗಿದ್ದಾಗ ಸೈಜ್ ಕಲ್ಲನ್ನು ಆತನ ತಲೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ, ಹಣ್ಣಿನ ಮಧ್ಯದಲ್ಲಿ ಹೂತು ಹಾಕಿ ಪರಾರಿಯಾಗಿದ್ದನು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದರು. ಶುಕ್ರವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಹಾವೇರಿ ಜಿಲ್ಲೆಯ ಕಾಗಿನೆಲೆ ಗ್ರಾಮವೊಂದರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಜಮೀವುಲ್ಲಾನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆ ಮಾಡಿದ್ದು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಪೊಲೀಸರು ಮುಂದಿನ ಕ್ರಮ ಜರಗಿಸಿದ್ದಾರೆ. ನಗರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಜನಾದರ್ನ್ ಬಿ.ಎಲ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದಫೆೇದರ್‌ಗಳಾದ ಕೃಷ್ಣಪ್ಪ, ಸುರೇಂದ್ರ, ಗೃಹರಕ್ಷಕ ದಳ ಸಿಬ್ಬಂದಿ ಅಲಿನಾಗ ಹಾಗೂ ವಾಹನ ಚಾಲಕ ಮಲ್ಲನಗೌಡ ಪಾಲ್ಗೊಂಡಿದ್ದರು. ಆರೋಪಿ ಜಮೀವುಲ್ಲಾ ಈ ಹಿಂದೆಯೂ ಹಂಸಬಾವಿಯ ಮೃತ್ಯುಂಜಯ ವಿದ್ಯಾಪೀಠದ ಬಳಿ ವೀರಪ್ಪ ಚನ್ನಪ್ಪ (60) ಎಂಬ ವ್ಯಕ್ತಿಯನ್ನು 2002ರಲ್ಲಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು. 2009ರಲ್ಲಿ ಶಿವಮೊಗ್ಗದ ಪೊಲೀಸ್ ಚೌಕಿ ಬಳಿ ಮಲಗಿದ್ದ ಭಿಕ್ಷುಕನೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು. 2010ರಲ್ಲಿ ಮಂಗಳೂರಿನಲ್ಲಿ ಅಬ್ದುಲ್ ರಝಾಕ್ ಎಂಬ ವ್ಯಕ್ತಿಯನ್ನು ರಾಡ್‌ನಿಂದ ಹೊಡೆದು, ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು. ಈ ಮೂರು ಪ್ರಕರಣಗಳಲ್ಲಿ ಆರೋಪಿ ಜಮೀವುಲ್ಲಾ ಶಿಕ್ಷೆ ಅನುಭವಿಸಿ ಹೊರಗೆ ಬಂದಿದ್ದನು.





