‘ವಾಸಿಸುವವನೇ ಮನೆಯ ಒಡೆಯ’ ಸುಗ್ರಿವಾಜ್ಞೆ ಜಾರಿಗೆ ಶಾಸಕರ ಆಗ್ರಹ
ಸೂರು ರಹಿತರಿಗೆ ಸೂರು ನೀಡಲು ಮನವಿ
ದಾವಣಗೆರೆ, ಸೆ.4: ರಾಜ್ಯದಲ್ಲಿ ಸೂರುರಹಿತ ಸಾವಿರಾರು ಬಡ ಜನರಿಗಾಗಿ ‘ವಾಸಿಸುವವನೇ ಮನೆಯ ಒಡೆಯ’ ಎಂಬ ಸುಗ್ರಿವಾಜ್ಞೆ ಜಾರಿಗೆ ತರುವ ಮೂಲಕ ಹಾಡಿ, ಹಟ್ಟಿ, ತಾಂಡಗಳಲ್ಲಿ ನೆಲೆಸಿರುವ ಜನರಿಗೆ ವಾಸಿಸುವ ಹಕ್ಕನ್ನು ನೀಡಬೇಕು ಎಂದು ಶಾಸಕ ಶಿವಮೂರ್ತಿನಾಯ್ಕಿ ಆಗ್ರಹಿಸಿದರು.
ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ದಾಖಲೆ ರಹಿತ ಜನವಸತಿಗಳನ್ನು ಸುಗ್ರಿವಾಜ್ಞೆ ಮೂಲಕ ರಾಜ್ಯ ಸರಕಾರ ‘ವಾಸಿಸುವನೇ ಮನೆಯ ಒಡೆಯ’ ಕಾಯ್ದೆ ಜಾರಿಗೆ ತರಬೇಕು. ಈ ಕಾಯ್ದೆಯಂತೆ ರಾಜ್ಯದಲ್ಲಿ ದಾಖಲೆ ರಹಿತವಾಗಿರುವ 58 ಸಾವಿರ ಜನವಸತಿಗೆ ಕಾನೂನಿನ ಹಕ್ಕು ನೀಡುವ ಆವಶ್ಯಕತೆ ಇದ್ದು, ಈ ಕುರಿತು ತಾನು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡನೆ ಮಾಡಿದ್ದೇನೆ. ಇದನ್ನು ಸರಕಾರ ಮುಂಬರುವ ಅಧಿವೇಶನದಲ್ಲಿ ಅಂಗೀಕರಿಸಬೇಕು ಎಂದು ಅವರು ಒತ್ತಾಯಿಸಿದರು.
ತಾನು ಇತ್ತೀಚೆಗೆ ಅನುಸೂಚಿತ ಜಾತಿ ಮತ್ತು ಪಂಗಡದ ಶಾಸಕರ ಸಮಿತಿ ಅಧ್ಯಕ್ಷನಾಗಿ ನೇಮಕವಾಗಿದ್ದೇನೆ. ಈ ದಾಖಲೆರಹಿತ ಜನವಸತಿಗಳ ಕುರಿತು ರಾಜ್ಯಾದ್ಯಂತ ಮಾಹಿತಿ ಕಲೆ ಹಾಕುತ್ತಿದ್ದು, ಕೆಲ ಜಿಲ್ಲೆಗಳಿಂದ ಸ್ವಲ್ಪ ಮಾಹಿತಿ ಸಿಕ್ಕಿದೆ. ಉಳಿದ ಮಾಹಿತಿ ಶೀಘ್ರವೇ ಎಲ್ಲಾ ಜಿಲ್ಲೆಗಳಿಂದ ಅಧಿಕಾರಿಗಳು ಕಳುಹಿಸಿಕೊಡಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಮಹೇಶ್ವರಪ್ಪ, ಹನುಮಂತನಾಯ್ಕಿ, ಕೃಷ್ಣಪ್ಪಉಪಸ್ಥಿತರಿದ್ದರು.





