ಕೆಎಸ್‌ಎಫ್‌ಸಿ ಕಟ್ಟಡ ಜಪ್ತಿಗೆ ಆದೇಶಿಸಿದ ನ್ಯಾಯಾಲಯ
ೆಂಗಳೂರು, ಸೆ.4: ಸಾಲ ತೆಗೆದುಕೊಂಡವರ ಆಸ್ತಿ ಜಪ್ತಿ ಮಾಡು ತ್ತಿದ್ದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ(ಕೆಎಸ್‌ಎಫ್‌ಸಿ)ಯ ಕಟ್ಟಡವನ್ನೇ ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿದೆ.
ಹೌದು, ಇದು ನಂಬಲು ತುಸು ಕಷ್ಟವೆನಿಸಿದರೂ ನಂಬಲೇ ಬೇಕಾದ ಸಂಗತಿ. ಕೊಟ್ಟಿರುವ ಸಾಲ ಕಟ್ಟದಿದ್ದರೆ ಆಸ್ತಿಯನ್ನೇ ಜಪ್ತಿ (ವಶಕ್ಕೆ) ಮಾಡಿಕೊಳ್ಳು ತ್ತದೆ ಕರ್ನಾಟಕ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ). ಇಂತಹ ಕೆಎಸ್‌ಎಫ್‌ಸಿಯ ಬೆಂಗಳೂರಿನ ಮುಖ್ಯ ಕಟ್ಟಡವನ್ನೇ ವಶಪಡಿಸಿಕೊಳ್ಳಿ ಎಂಬ ಆದೇಶ ಸಾಲ ವಸೂಲಾತಿ ನ್ಯಾಯಾಧೀಕರಣದಿಂದ ಹೊರ ಬಿದ್ದಿದೆ. ಕೆಎಸ್‌ಎಫ್‌ಸಿ ರಾಜ್ಯದಲ್ಲಿ ಇಲ್ಲಿಯವರೆಗೆ ಹಲವಾರು ಉದ್ದಿಮೆಗಳೂ ಸೇರಿದಂತೆ ಅನೇಕ ವಿವಿಧ ಸಾಲ ನೀಡಿದೆ. ಒಂದು ಕಾಲದಲ್ಲಿ ನಷ್ಟದಲ್ಲಿದ್ದ ಸಂಸ್ಥೆ ಈಗ ಹಳಿ ಮೇಲೆ ನಡೆಯು ತ್ತಿದೆ. ಈಗ ಸಾಲ ಕೊಟ್ಟು ಸುಸ್ತಿದಾರರ ಆಸ್ತಿಯನ್ನು ಜಪ್ತಿ ಮಾಡುವ ಕೆಎಸ್‌ಎಫ್‌ಸಿಯನ್ನೇ ವಶಕ್ಕೆ ಪಡೆಯಿರಿ ಎಂದು ನ್ಯಾಯಾಧಿಕರಣ ಆದೇಶಿಸಿದೆ. ಯಾರದೋ ಸಾಲಕ್ಕೆ ಭದ್ರತೆ ನಿಂತು ಇದೀಗ ತನ್ನ ಸ್ವಂತ ಕಟ್ಟಡವನ್ನೇ ಕಳೆದು ಕೊಳ್ಳುವ ಸ್ಥಿತಿಗೆ ಕೆಎಸ್‌ಎಫ್‌ಸಿ ಬಂದು ನಿಂತಿದೆ. ಕಟ್ಟಡಕ್ಕೆ ಬೀಗ ಹಾಕಲಾಗುವುದು ಎಂದು ನ್ಯಾಯಾಲಯ ನೀಡಿರುವ ಆದೇಶದ ಪ್ರತಿಯನ್ನು ಬೆಂಗಳೂರಿನ ತಿಮ್ಮಯ್ಯ ರಸ್ತೆಯಲ್ಲಿರುವ ಕಂಟ್ರೋಲ್‌ಮೆಂಟ್ ರೈಲ್ವೆ ಸ್ಟೇಷನ್‌ನ ಬಳಿಯ ಮುಖ್ಯ ಕಚೇರಿ ಹೊಂದಿರುವ ಕೆಎಸ್‌ಎಫ್‌ಸಿ ಕಟ್ಟಡದಲ್ಲಿ ಅಂಟಿಸಲಾಗಿತ್ತು. ಈ ಮುಜುಗರದಿಂದ ಪಾರಾಗಲು ಸಿಬ್ಬಂದಿ ಆದೇಶದ ಪ್ರತಿಯನ್ನು ಈಗ ನಾಪತ್ತೆ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ:
ರಾಜ್ಯದಲ್ಲಿ ಉದ್ದಿಮೆ ನಡೆಸುತ್ತಿದ್ದ ಬಿಎಸ್ ಇಂಡಸ್ಟ್ರೀಸ್ ಸಂಸ್ಥೆಗೆ ಕೆಎಸ್‌ಎಫ್‌ಸಿ ಈ ಹಿಂದೆ ಸಾಲ ನೀಡಿತ್ತು. ಹೀಗಿದ್ದಾಗ ಈ ಸಾಲ ಸಾಕಾಗುವುದಿಲ್ಲ ಎಂದು ಬಿಎಲ್ ಇಂಡಸ್ಟ್ರೀಸ್ ಸಿಕಂದರಾಬಾದ್‌ನಲ್ಲಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಿಂದ ಹೆಚ್ಚುವರಿ ಸಾಲ ಪಡೆದುಕೊಳ್ಳಲು ಮುಂದಾಗಿತ್ತು. ಈ ಹೆಚ್ಚುವರಿ ಸಾಲಕ್ಕೆ ಕೆಎಸ್‌ಎಫ್‌ಸಿ ಗ್ಯಾರಂಟಿ ಹಾಕುವ ಮೂಲಕ ಯಡವಟ್ಟು ಮಾಡಿಕೊಂಡಿದೆ. ಏಕೆಂದರೆ ಮೊದಲಿಗೆ ಸಾಲ ಪಡೆದಿದ್ದ ಬಿಎಲ್ ಇಂಡಸ್ಟ್ರೀಸ್ ದಾಖಲೆಗಳೆಲ್ಲವೂ ಕೆಎಸ್‌ಎಫ್‌ಸಿ ಬಳಿಯಿತ್ತು. ಹೆಚ್ಚುವರಿ ಸಾಲ ಕೇಳಿದಾಗ ಸಂಬಂಧಿಸಿದ ದಾಖಲೆಗಳೆಲ್ಲ ಕರ್ನಾಟಕದ ಕೆಎಸ್‌ಎಫ್‌ಸಿಯಲ್ಲಿದೆ, ಬೇಕಾದರೆ ಗ್ಯಾರಂಟಿ ಕೇಳಿ ಎಂದು ಬಿಎಲ್ ಇಂಡಸ್ಟ್ರೀಸ್ ಓರಿಯಂಟಲ್ ಬ್ಯಾಂಕಿಗೆ ಹೇಳಿಕೆ ನೀಡಿತ್ತು. ಈ ಸಂಬಂಧ ಬ್ಯಾಂಕ್ ನಡೆಸಿದ್ದ ಪತ್ರ ವ್ಯವಹಾರದಲ್ಲಿ ದಾಖಲೆಗಳು ನಮ್ಮ ಬಳಿ ಇದೆ ಎಂದು ಕೆಎಸ್‌ಎಫ್‌ಸಿ ಗ್ಯಾರಂಟಿ ನೀಡಿತ್ತು. ಇದರ ಆಧಾರದಂತೆ ಓರಿಯಂಟಲ್ ಬ್ಯಾಂಕ್ ಸಾಲ ಮಂಜೂರು ಮಾಡಿತ್ತು. ಒಂದೂವರೆ ಕೋಟಿ ಸಾಲಕ್ಕೆ ಹೆಚ್ಚು ಕಡಿಮೆ 14 ಕೋಟಿ ರೂ. ಬಡ್ಡಿ ಬೆಳೆದು 16 ಕೋಟಿ ರೂ.ಗೆ ಮುಟ್ಟಿದೆ. ಆದರೆ, ಸಾಲ ಪಡೆದ ಬಿಎಲ್ ಇಂಡಸ್ಟ್ರೀಸ್ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕಿನವರು ಕೆಎಸ್‌ಎಫ್‌ಸಿ ಬಳಿ ದಾಖಲೆಗಳನ್ನು ಕೇಳಿದ್ದರು. ಇದಕ್ಕೆ ಕೆಎಸ್‌ಎಫ್‌ಸಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಬಿಎಲ್ ಇಂಡಸ್ಟ್ರೀಸ್ ತನಗೆ ನೀಡಬೇಕಾದ ಸಾಲ ಹಾಗೂ ಬಡ್ಡಿ ಕಟ್ಟಿಲ್ಲ ಎಂದು ಓರಿಯಂಟಲ್ ಬ್ಯಾಂಕ್, ಹೈದರಾಬಾದ್‌ನಲ್ಲಿರುವ ಸಾಲ ವಸೂಲಾತಿ ನ್ಯಾಯಾಧಿಕರಣದ ಮುಂದೆ ಕೆಎಸ್‌ಎಫ್‌ಸಿಯನ್ನು ಪ್ರತಿವಾದಿಯನ್ನಾಗಿ ಮಾಡಿ, 2008ರಲ್ಲಿ ಪ್ರಕರಣ ದಾಖಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಧಿಕರಣ ಮೇ 5ರಂದು ಕೆಎಸ್‌ಎಫ್‌ಸಿ ಕಟ್ಟಡ ಜಪ್ತ್ತಿಗೆ ವಾರಂಟ್ ಹೊರಡಿಸಿದೆ. ಆದರೆ, ಕೆಎಸ್‌ಎಫ್‌ಸಿ ಇದಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.







