ಹಬ್ಬದ ಗದ್ದಲಗಳಲ್ಲಿ ಗಣೇಶನಿಗೆ ಅವಮಾನ
ಮಾನ್ಯರೆ,
ಗಣೇಶ ಹಬ್ಬ ಹತ್ತಿರ ಬರುತ್ತಿದೆ. ಹಿಂದೆಲ್ಲ ಚೌತಿಯೆಂದರೆ ಮನೆಮನದ ಹಬ್ಬ. ಆದರೆ ಇತ್ತೀಚೆಗೆ ಮುಂಬಯಿ, ಮಹಾರಾಷ್ಟ್ರದ ಪ್ರಭಾವದಿಂದ ಚೌತಿಯೂ ಸಾರ್ವಜನಿಕ ಗದ್ದಲವಾಗಿ ಪರಿಣಮಿಸಿದೆ. ಜೊತೆಗೆ ರಾಜಕೀಯವೂ ಈ ಹಬ್ಬದ ಜೊತೆಗೆ ಕಲಬೆರಕೆಯಾಗಿ, ಹಲವು ಅನಾಹುತಗಳಿಗೂ ಕಾರಣವಾಗುತ್ತಿದೆ. ಸಾರ್ವಜನಿಕ ಮೆರವಣಿಗೆಯ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ದಾಂಧಲೆಗಳನ್ನು ನಡೆಸುತ್ತಾರೆ. ಸಮಾಜದ ಸ್ವಾಸ್ಥವನ್ನು ಕೆಡಿಸಲು ಇದನ್ನು ಬಳಸುತ್ತಾರೆ. ಗಣೇಶ ವಿಘ್ನ ನಿವಾರಕ. ಆದರೆ ಆತನ ಹೆಸರಿನಲ್ಲೇ ಕೆಲವು ವಿಘ್ನಗಳು ಜಾಗೃತಗೊಳ್ಳುತ್ತವೆ.
ಇದೇ ಸಂದರ್ಭದಲ್ಲಿ ಗಣೇಶಹಬ್ಬದ ಹೆಸರಿನಲ್ಲಿ ನಮ್ಮ ಕೆರೆ, ನದಿಗಳನ್ನು ಸರ್ವ ರೀತಿಯಲ್ಲೂ ಕಲುಷಿತಗೊಳಿಸಲಾಗುತ್ತದೆ. ಭಾರತೀಯ ಸಂಸ್ಕೃತಿ ಅದರಲ್ಲೂ ಹಿಂದೂ ಧರ್ಮೀಯರು ನದಿಯನ್ನು, ಕೆರೆಗಳನ್ನು ಪೂಜನೀಯ ಭಾವದಿಂದ ನೋಡುತ್ತಾರೆ. ಆದರೆ ಹಬ್ಬದ ಹೆಸರಿನಲ್ಲಿ ನಾವೇ ಪರಿಸರವನ್ನು ಅದರಲ್ಲೂ ಬದುಕಿಗೆ ಅನಿವಾರ್ಯವಾಗಿರುವ ಕೆರೆಗಳನ್ನು, ನದಿಗಳನ್ನು ಕಲುಷಿತಗೊಳಿಸಿದರೆ ಹೇಗೆ? ಇದು ನಾವು ಗಣೇಶ ಹಬ್ಬಕ್ಕೆ ಮಾಡುವ ಅವಮಾನವಲ್ಲವೇ? ಗಣೇಶ ಹಬ್ಬ ಪ್ರಕೃತಿಗೆ ಸಂಬಂಧಿಸಿದ್ದು. ಪ್ರಕೃತಿಗೆ ಗೌರವ ನೀಡುವುದೇ ಗಣೇಶನಿಗೆ ನೀಡುವ ಗೌರವ. ಹಬ್ಬದ ಗದ್ದಲ ಸಂಭ್ರಮದ ಹೆಸರಲ್ಲಿ ಪ್ರಕೃತಿಯನ್ನು ಅವಮಾನಿಸಿದರೆ, ಅದನ್ನು ಕೆಡಿಸಿದರೆ ಅದರಿಂದ ನಮಗೆ ಖಂಡಿತ ಗಣೇಶ ಒಳಿತನ್ನು ಮಾಡಲಾರ. ಹಾಗೆಯೇ ಗಣೇಶ ಹಬ್ಬ ನಮ್ಮ ಮನಸ್ಸನ್ನು ಒಳ್ಳೆಯದರ ಕಡೆಗೆ ಕೊಂಡು ಹೋಗಬೇಕು. ದ್ವೇಷ ಅಶಾಂತಿ ಅಳಿದು ಅಲ್ಲಿ ಒಳಿತು ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಗಣೇಶ ಚತುರ್ಥಿ ಅರ್ಥಪೂರ್ಣವಾಗಿ ಆಚರಣೆಯಾಗಲಿ.







