ತನ್ನ ಪ್ರಾಣ ಪಣಕ್ಕಿಟ್ಟು 16 ಶಾಲಾ ಮಕ್ಕಳನ್ನು ಕಾಪಾಡಿದ ಪೊಲೀಸ್ ಪೇದೆ
ಹೊಸದಿಲ್ಲಿ, ಸೆ,4: ಪ್ರವಾಹಪೀಡಿತ ದಿಲ್ಲಿಯಲ್ಲಿ ಪೊಲೀಸ್ ಪೇದೆಯೊಬ್ಬ ತನ್ನ ಪ್ರಾಣ ಪಣಕ್ಕಿಟ್ಟು 16 ಶಾಲಾ ಮಕ್ಕಳನ್ನು ಕಾಪಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬುಧವಾರ ಭಾರೀ ಪ್ರವಾಹಕ್ಕೆ ತತ್ತರಿಸಿದ ದಿಲ್ಲಿಯ ಫರೀದಾಬಾದ್‌ನ ಈಶ್ಲೆರ್ ಪಬ್ಲಿಕ್ ಸ್ಕೂಲ್‌ನ ಎರಡು ಶಾಲಾ ವಾಹನಗಳು ದಕ್ಷಿಣ ದಿಲ್ಲಿಯ ಮೆಹರೌಲಿ- ಭದ್ರಾಪುರ ರಸ್ತೆಯ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಸಿಕ್ಕಿಹಾಕಿಕೊಂಡವು. ಇದರಿಂದ ಬಸ್ಸುಗಳಲ್ಲಿದ್ದ 125 ಮಕ್ಕಳು ಮತ್ತು 18 ಮಂದಿ ಸಿಬ್ಬಂದಿ ಭೀತಿಯಿಂದ ಕಂಗೆಟ್ಟರು. ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿತ್ತು. ಒಂದು ಬಸ್ಸು ಅರ್ಧ ಮುಳುಗಿತ್ತು. ನೀರು ಹೊಕ್ಕಿದ ಪರಿಣಾಮವಾಗಿ ಬಸ್ಸುಗಳ ಎಂಜಿನ್‌ಗಳು ಬಂದ್ ಆಗಿದ್ದವು.
ಬಸ್ಸಿನಲ್ಲಿದ್ದ 9-10 ವರ್ಷದ ಮಕ್ಕಳು ನೋಯ್ಡಿದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ತಕ್ಷಣ ಸಿಬ್ಬಂದಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ತಕ್ಷಣ ಪೊಲೀಸ್ ತಂಡ ಪರಿಹಾರ ಕಾರ್ಯಾಚರಣೆಗೆ ಧಾವಿಸಿತು. ಭೀತಿಯಿಂದ ಮಕ್ಕಳು ಬಸ್ಸಿನ ಟಾಪ್ ಏರಿದರು. ಅಗ್ನಿಶಾಮಕ ದಳ ಸಿಬ್ಬಂದಿ ಈಜಿಕೊಂಡು ಹೋಗಿ ಮಕ್ಕಳನ್ನು ರಕ್ಷಿಸಿದರು.
ಅದರಲ್ಲೂ ಮುಖ್ಯವಾಗಿ ದಿಲ್ಲಿ ಪೊಲೀಸ್ ಪಡೆಯ ಮುಖ್ಯಪೇದೆ ಮುರಾರಿ ರಾವ್ ಅಪೂರ್ವ ಸಾಹಸ ಮೆರೆದು, ಮುಳುಗಿದ್ದ ಬಸ್ಸಿನಿಂದ 16 ಮಕ್ಕಳನ್ನು ರಕ್ಷಿಸಿದರು. ಮಕ್ಕಳು ನೆರವಿಗಾಗಿ ಬೊಬ್ಬಿಡುತ್ತಿದ್ದಾಗ, ಮುರಾರಿ, ಚರಂಡಿ ನೀರು ಮಿಶ್ರಿತ ಪ್ರವಾಹಕ್ಕೆ ಧುಮುಕಿ, ಹೆಗಲ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಸುರಕ್ಷಿತ ಪ್ರದೇಶಕ್ಕೆ ತಲುಪಿಸಿದರು. ಸುಮಾರು ಒಂದು ಗಂಟೆ ಕಾಲ ಪ್ರವಾಹದಲ್ಲಿ ಈಜಿ ಮಕ್ಕಳನ್ನು ಕಾಪಾಡಿದರು ಎಂದು ಪೊಲೀಸರು ಹೇಳಿದ್ದಾರೆ.





