ಮದರ್ ತೆರೇಸಾ ತೆರೆದ ಪವಾಡದ ಬಾಗಿಲು

ಮದರ್ ತೆರೇಸಾ ಅವರಿಗೆ ಕ್ರಿಶ್ಚಿಯನ್ ಧರ್ಮದ ಸರ್ವೋನ್ನತ ನಾಯಕರು ಸಂತ ಪದವಿಯನ್ನು ನೀಡಿರುವುದು ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. ಜಗತ್ತಿನ ಅದರಲ್ಲೂ ಭಾರತದ ಕ್ರಿಶ್ಚಿಯನ್ನರಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಕ್ರಿಶ್ಚಿಯನ್ನರ ಪಾಲಿಗೆ ನಿನ್ನೆಯವರೆಗೂ ಸಾಮಾನ್ಯ ನಮ್ಮ ನಿಮ್ಮಂತಹ ಮನುಷ್ಯರಾಗಿದ್ದ ತೆರೇಸಾ, ಇಂದಿನಿಂದ ಸಂತ ತೆರೇಸಾ ಆಗಿ ಪರಿವರ್ತನೆಗೊಂಡಿದ್ದಾರೆ. ಅದಕ್ಕೆ ಪೂರಕವಾದ ಕೆಲವು ಪವಾಡಗಳು ಭಾರತದಲ್ಲಿ ನಡೆದಿವೆ ಎಂದು ಕ್ರಿಶ್ಚಿಯನ್ನರು ನಂಬುತ್ತಾರೆ. ಆದರೆ ತೆರೇಸಾ ಕೇವಲ ಕ್ರಿಶ್ಚಿಯನ್ನರಿಗೆ ಮಾತ್ರ ಸಂಬಂಧಿಸಿದ ಮಹಿಳೆಯಾಗಿ ಭಾರತದಲ್ಲಿ ಬೆಳೆಯಲಿಲ್ಲ. ತನ್ನ ಸೇವೆ, ಮಾತೃ ಹೃದಯದ ಮೂಲಕ ಇಡೀ ಭಾರತೀಯರ ತಾಯಿಯಾಗಿ ಅವರು ಬೆಳೆದಿದ್ದಾರೆ. ಅವರ ಮಡಿಲಲ್ಲಿ ಆರೈಕೆ ಪಡೆದ ರೋಗಿಗಳಿಗೆ ಯಾವ ಧರ್ಮವೂ ಇದ್ದಿರಲಿಲ್ಲ. ಸಂತರಾಗಿ ತೆರೇಸಾ ಅವರು ಮಾಡಿದ ಪವಾಡಕ್ಕಿಂತ, ಸಾಮಾನ್ಯ ಮನುಷ್ಯಳಾಗಿ ಕುಷ್ಠ ರೋಗಿಗಳ ಕೊಳೆತ ಕಾಲುಗಳನ್ನು ತೊಳೆದ ತೆರೇಸಾ ಅವರೇ ನಮಗಿಂದು ಹೆಚ್ಚು ಮುಖ್ಯವಾಗಬೇಕಾಗಿದೆ.
ತೆರೇಸಾ ಅವರು ತಮ್ಮ ಪವಾಡಗಳ ಮೂಲಕ ಕ್ಯಾನ್ಸರ್ ರೋಗ ವಾಸಿ ಮಾಡಿದರೆನ್ನುವ ನಂಬಿಕೆ ವೆಟಿಕನ್‌ಗೆ ಸಂಬಂಧಪಟ್ಟದ್ದು. ಆ ನಂಬಿಕೆ ಖಾಸಗಿಯಾದುದು; ಕ್ರಿಶ್ಚಿಯನ್ನರಿಗಷ್ಟೇ ಸಂಬಂಧಿಸಿದ್ದು. ಎಲ್ಲರೂ ಇದನ್ನು ಒಪ್ಪಬೇಕು ಎಂದಿಲ್ಲ.ಆದರೆ ತೆರೇಸಾ ಅವರು ಸೇವೆಯ ಮೂಲಕ ಮಾಡಿದ ಪವಾಡ ಮನುಕುಲದ ಎಲ್ಲರಿಗೂ ಸಂಬಂಧಿಸಿದ್ದು. ಆದುದರಿಂದ ಸಂತ ತೆರೇಸಾರಿಗಿಂತ ಸಾಮಾನ್ಯ ಮನುಷ್ಯಳಾಗಿ ತೆರೇಸಾ ಮಾಡಿದ ಪವಾಡವೇ ಬಹುಮುಖ್ಯವಾಗಿದೆ.ಅದುವೇ ನಮಗೆ ಆದರ್ಶವಾಗಿದೆ. ತೆರೇಸಾ ಅವರು ಭಾರತಕ್ಕೆ ಹೊಸತೊಂದು ಧರ್ಮವನ್ನು ಪರಿಚಯಿಸಿದರು. ಭಾರತಕ್ಕೆ ತೀರಾ ಅಪರಿಚಿತವಾದ ‘ಸೇವೆ’ ಎನ್ನುವ ಧರ್ಮ ಅದು. ಅದು ಕುಷ್ಠ ರೋಗ ಇಡೀ ದೇಶವನ್ನು ವೃಣದಂತೆ ಕಾಡುತ್ತಿದ್ದ ಸಂದರ್ಭ. ಕುಷ್ಠ ರೋಗ ಇನ್ನೊಬ್ಬರಿಗೆ ಸಾಂಕ್ರಾಮಿಕವಾಗಿ ಹರಡುತ್ತದೆ ಎಂದು ನಂಬಿದ್ದ ಕಾಲ. ಸಮಾಜದಿಂದ ಕುಷ್ಠ ರೋಗಪೀಡಿತರು ಸಂಪೂರ್ಣ ಬಹಿಷ್ಕೃತರಾಗುತ್ತಿದ್ದ ದುರ್ದಿನಗಳಲ್ಲಿ ಮದರ್ ತೆರೇಸಾ ತಾಯಿಯಂತೆ ಅವರೆಡೆಗೆ ಕೈ ಚಾಚಿದರು. ತನ್ನ ಸಹೋದ್ಯೋಗಿಗಳ ಜೊತೆಗೆ ಅವರ ವೃಣವನ್ನು ತೊಳೆದರು. ತನ್ನ ಆಶ್ರಮದಲ್ಲಿ ಅವರಿಗೆ ಆಶ್ರಯವನ್ನಿತ್ತರು.
ಹಾಗೆಯೇ ವೃದ್ಧರು, ಕೋಲ್ಕತಾದ ಬೀದಿ ಬದಿಯ ಮಕ್ಕಳು, ಬೇರೆ ಬೇರೆ ಬಗೆಯ ರೋಗಿಗಳಿಗೆ ತೆರೇಸಾ ತಾಯಿಯಾದರು. ಅವರ ತಾಯ್ತನಕ್ಕೆ ಮನಸೋತ ಕೆಳವರ್ಗದ ಸಾವಿರಾರು ಮಂದಿ ಕ್ರಿಶ್ಚಿಯನ್ನರಾಗಿ ಮತಾಂತರವೂ ಆದರು. ಆದರೆ ಯಾವ ಧರ್ಮ ತನ್ನ ಕೊಳೆತ ದೇಹವನ್ನು ಪ್ರೀತಿಯಿಂದ ಸ್ವೀಕರಿಸುತ್ತದೆಯೋ ಆ ಧರ್ಮಕ್ಕೆ ಓರ್ವ ಮತಾಂತರವಾಗಲು ಇಷ್ಟ ಪಟ್ಟರೆ ಅದರಲ್ಲಿ ತಪ್ಪೇನಿದೆ? ಧರ್ಮವನ್ನು ಶ್ಲೋಕಗಳ ಆಧಾರದಲ್ಲಿ ಹರುಡುವವರಿಗೆ, ಸೇವೆಯ ಹೊಸ ದಾರಿಯೊಂದನ್ನು ತೋರಿಸಿಕೊಟ್ಟವರು ಮದರ್ ತೆರೇಸಾ. ಸೇವೆಯನ್ನೇ ಒಂದು ಧರ್ಮವಾಗಿಸಿದ ತೆರೇಸಾ ಆ ಮೂಲಕ ಧರ್ಮದ ವ್ಯಾಖ್ಯಾನವನ್ನೇ ಹಿರಿದು ಗೊಳಿಸಿದರು. ವಿದೇಶದಿಂದ ಬಂದು, ಒಬ್ಬ ಮಹಿಳೆಯಾಗಿ ಆಕೆ ಭಾರತನ ನೆಲದಲ್ಲಿ ಬೇರು ಬಿಟ್ಟ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದು. ಹೀಗಿರುವಾಗ, ಆಕೆ ಕ್ಯಾನ್ಸರನ್ನು ಪವಾಡದ ಮೂಲಕ ಗುಣ ಪಡಿಸಿರುವುದು ನಿಜವೋ ಸುಳ್ಳೋ ಎನ್ನುವುದೇ ನಮಗೆ ಅಮುಖ್ಯ. ಆಕೆ ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯಳಾಗಿ ಏರಿದ ಎತ್ತರವೇ ನಮಗೆ ಮುಖ್ಯವಾಗಬೇಕು.
ಮದರ್ ತೆರೇಸಾರ ವ್ಯಕ್ತಿತ್ವಕ್ಕೆ ಕಳಂಕ ತರುವ, ಅವರನ್ನು ಟೀಕಿಸುವ ಮನಸ್ಸುಗಳು ಈಗಲೂ ಜೀವಂತವಾಗಿವೆ. ಆಕೆ ಮತಾಂತರ ಮಾಡುವುದಕ್ಕಾಗಿ ಭಾರತಕ್ಕೆ ಬಂದರು ಎಂದೂ ಆರೋಪಿಸುತ್ತವೆ. ಆದರೆ ಈ ಟೀಕಿಸುವ ಮನಸ್ಸುಗಳು ಭಾರತದಲ್ಲಿ ಮಾಡಿರುವುದಾದರೂ ಏನು? ಕೆಳ ಜಾತಿಯವರು ಎಂಬ ಕಾರಣಕ್ಕೆ ತಮ್ಮದೇ ಜನರಿಗೆ ನೀರು ಮುಟ್ಟುವುದಕ್ಕೂ ಅವಕಾಶವನ್ನು ನಿರಾಕರಿಸಿದರು. ತಮ್ಮ ದೇವಸ್ಥಾನಕ್ಕೆ ಪ್ರವೇಶ ಮಾಡಲೂ ಅವಕಾಶ ನೀಡದೆ, ಅವರನ್ನು ಸಮಾಜದಿಂದ ಹೊರಗಿಟ್ಟರು. ಇನ್ನು ಕುಷ್ಠದಂತಹ ಮಾರಕ ರೋಗಪೀಡಿತರನ್ನು ಪಾಪಿಗಳು ಎಂಬ ದೃಷ್ಟಿಯಲ್ಲಿ ನೋಡಿದರು. ಇಂತಹ ಸಮಾಜಕ್ಕೆ ಕಾಲಿಟ್ಟು ಅವರ ಕಣ್ಣನ್ನು ತೆರೆಸಿದ್ದು ಮದರ್ ತೆರೇಸಾ ಅವರು. ಈ ದೇಶದ ವೈದಿಕ ಮನಸ್ಸು ತಿರಸ್ಕರಿಸಿದ ಜನರನ್ನು ಮದರ್ ತೆರೇಸಾ ಸ್ವೀಕರಿಸಿದರು. ಈ ಸ್ವೀಕಾರವನ್ನು ಸಹಿಸದ ಜನರೇ ಮದರ್ ತೆರೇಸಾರ ತಲೆಗೆ ಮತಾಂತರದ ಕಳಂಕವನ್ನು ಕಟ್ಟಿದರು. ನಿಜಕ್ಕೂ ಸೇವೆಯಿಂದ ಮತಾಂತರ ಸಾಧ್ಯ ಎಂದ ಮೇಲೆ, ತಾವೇ ಆ ಕೆಲಸವನ್ನು ಮಾಡಬಹುದಿತ್ತಲ್ಲ ಎಂಬ ಪ್ರಶ್ನೆಗೆ ಇವರಲ್ಲಿ ಉತ್ತರವಿಲ್ಲ. ಅದಾವ ಕಾರಣವೇ ಇರಲಿ, ಬೀದಿಯಲ್ಲಿ ಬಿದ್ದ ಒಬ್ಬ ಕುಷ್ಠ ರೋಗಿಯನ್ನು ಎತ್ತಿಕೊಂಡು ಹೋಗಿ ಅವನ ಆರೈಕೆಯನ್ನು ಮಾಡುವವರು ಎಲ್ಲ ದೃಷ್ಟಿಯಲ್ಲೂ ಶ್ರೇಷ್ಠರೇ ಆಗಿದ್ದಾರೆ. ಅಂತಹ ಮನುಷ್ಯರ ಮಾತೃಹೃದಯಕ್ಕೆ ಮನಸೋತು ಒಬ್ಬ ಮತಾಂತರವಾದರೆ, ಅದಕ್ಕೆ ನಿಂದಿಸಬೇಕಾದದ್ದು ಮದರ್ ತೆರೇಸಾ ಅವರನ್ನಲ್ಲ. ಬದಲಿಗೆ, ತನ್ನದೇ ಸಮುದಾಯದ ಜನರನ್ನು ಆ ಸ್ಥಿತಿಯಲ್ಲೂ ಕಣ್ಣೆತ್ತಿ ನೋಡದ ವೈದಿಕ ಮನಸ್ಸುಗಳನ್ನು. ನಿರ್ಗತಿಕರ ಸೇವೆ ಮಾಡುತ್ತಾ, ನೊಂದ ಮನುಷ್ಯನನ್ನು ನಾವು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ಭಾರತಕ್ಕೆ ಮದರ್ ತೆರೇಸಾ ಕಲಿಸಿಕೊಟ್ಟರು. ಈ ದೇಶದಲ್ಲಿ ಕುಷ್ಠ ರೋಗಕ್ಕಿಂತಲೂ ಭೀಕರವಾದ ರೋಗವಾಗಿತ್ತು ವರ್ಣವ್ಯವಸ್ಥೆ, ಜಾತೀಯತೆ. ಮದರ್ ತೆರೇಸಾ ಮೂಲಕ ಆ ರೋಗದಿಂದ ಈ ದೇಶದ ಸಾವಿರಾರು ಜನರು ಬಿಡುಗಡೆ ಪಡೆದರು ಎನ್ನುವುದನ್ನು ನಾವು ನಿರಾಕರಿಸಲು ಸಾಧ್ಯವಿಲ್ಲ.
ಮದರ್ ತೆರೇಸಾ ಭಾರತಕ್ಕೆ ಬಂದು ಮಾಡಿದ್ದು ಮತಾಂತರವಲ್ಲ, ಮನಃ ಪರಿವರ್ತನೆ. ಅದನ್ನೂ ಸೇವೆಯ ಮೂಲಕ ಮಾಡಿದರೇ ಹೊರತು, ಬೋಧನೆ, ಉಪನ್ಯಾಸಗಳ ಮೂಲಕವಲ್ಲ. ನಿಧಾನಕ್ಕೆ ಧರ್ಮ ಗೆರೆಗಳಾಚೆ ಬೆಳೆದು ಸರ್ವ ಜನರ ಪ್ರೀತಿ ಪಾತ್ರ ತಾಯಿಯಾದರು. ಈ ಕಾರಣದಿಂದಲೇ, ಮದರ್ ತೆರೇಸಾ ಯಾವತ್ತೂ ಪವಾಡಗಳ ಮೂಲಕ ದಂತ ಕತೆಯಾಗಬಾರದು. ಸಂತರಾಗಿ ಘೋಷಿಸಿ ಅವರನ್ನ್ನು ಇಗರ್ಜಿಯ ಕಟ್ಟಡದೊಳಗೆ ಬಂಧಿಸಿಟ್ಟರೆ ಅದರಿಂದ ನಷ್ಟ ಮತ್ತೆ ಮನುಕುಲಕ್ಕೇ ಆಗಿದೆ. ಅವರು ನಮ್ಮ ನಿಮ್ಮಂತೆಯೇ ಈ ನೆಲದಲ್ಲೇ ಹುಟ್ಟಿದ ಒಬ್ಬ ಸಾಮಾನ್ಯ ಮನುಷ್ಯೆ. ಆ ಸಾಮಾನ್ಯಳೇ ತನ್ನ ಸೇವೆ, ತ್ಯಾಗಗಳ ಮೂಲಕ ಅಸಾಮಾನ್ಯಳಾಗಿ ಬೆಳೆದರು ಎನ್ನುವುದು ಭಾರತವೂ ಸೇರಿದಂತೆ ವಿಶ್ವದ ಜನರಿಗೆ ಆದರ್ಶವಾಗಬೇಕು. ಮದರ್ ತೆರೇಸಾ ಅವರನ್ನು ಮಾದರಿಯಾಗಿಟ್ಟುಕೊಂಡು, ಇನ್ನಷ್ಟು ಮಹಾ ತಾಯಂದಿರು ಈ ದೇಶದಲ್ಲಿ ಹುಟ್ಟಿ ಬರಬೇಕು.







