ಪೆರುವಾಜೆ ಸ್ಕಾರ್ಫ್ ವಿವಾದ
ಮಂಗಳೂರು, ಸೆ.4: ಸುಳ್ಯ ಸಮೀಪದ ಪೆರುವಾಜೆಯ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಅಥವಾ ಶಿರವಸ್ತ್ರವನ್ನು ಧರಿಸಿಕೊಂಡು ಕಾಲೇಜಿಗೆ ಬರುತ್ತಿರುವ ಬಗ್ಗೆ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರು ವಿರೋಧಿಸುತ್ತಿರುವುದು ಖಂಡನೀಯ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಸ್ಕಾರ್ಫ್ ವಿವಾದದ ಹಿನ್ನೆಲೆಯಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಹಾಗೂ ಪೋಷಕರ ಸಂಘದ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕಾಂತಮಂಗಲ, ಸ್ಥಾಪಿತ ಹಿತಾಶಕ್ತಿಗಳ ಒತ್ತಡಕ್ಕೆ ಮಣಿದು ವಿಶ್ವವಿದ್ಯಾನಿಲಯದ ನಿಯಮಕ್ಕೆ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ವಿ.ವಿ ಅಥವಾ ಸರಕಾರಿ ಕಾಲೇಜುಗಳ ನಿಯಮದಲ್ಲಿ ಸ್ಕಾರ್ಫ್ ಧರಿಸುವುದಕ್ಕೆ ಯಾವುದೇ ವಿರೋಧವಿಲ್ಲ. ಅದನ್ನು ತೆಗೆಸಬೇಕೆಂಬ ಕಾನೂನು ಕೂಡಾ ಇಲ್ಲ. ಆದರೆ, ಪ್ರಾಂಶುಪಾಲರ ಈ ಕ್ರಮವು ಸಂವಿಧಾನ ವಿರೋಧಿಯಾಗಿದೆ. ತಕ್ಷಣ ಪ್ರಾಂಶುಪಾಲರು ವಿ.ವಿ.ಯ ನಿಯಮ ಪಾಲಿಸಲು ಮುಂದಾಗಬೇಕು ಎಂದು ಸಿಎಫ್‌ಐ ಜಿಲ್ಲಾಧ್ಯಕ್ಷ ಮುಹಮ್ಮದ್ ಅಥಾವುಲ್ಲಾ ಒತ್ತಾಯಿಸಿದ್ದಾರೆ.





