‘ನೇತ್ರಾವತಿ ತಿರುವು ಯೋಜನೆಯಲ್ಲಿ ಸರಕಾರದಿಂದ ದ್ರೋಹ’
ಬೆಳ್ತಂಗಡಿ, ಸೆ.4: ನೇತ್ರಾವತಿ ತಿರುವು ಯೋಜನೆ ವಿರೋಧಿಸಿ ದ.ಕ. ಜಿಲ್ಲಾ ಬಂದ್, ಪ್ರತಿಭಟನೆ ಹಾಗೂ ಮನವಿಗೆ ಸರಕಾರ ಮಾನ್ಯತೆ ನೀಡಿಲ್ಲ. ನೇತ್ರಾವತಿ ತಿರುವು ಯೋಜನೆ ಬಗ್ಗೆ ಜಿಲ್ಲೆಯ ಜನರಿಗೆ ಸೂಕ್ತ ಮಾಹಿತಿ ನೀಡದೆ ಸರಕಾರ ದ್ರೋಹ ಮಾಡುತ್ತಿದೆ ಎಂದು ಪತ್ರಕರ್ತ ಲಕ್ಷ್ಮೀ ಮಚ್ಚಿನ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೆಳ್ತಂಗಡಿಯಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಪತ್ರಿಕಾ ದಿನಾಚರಣೆ ಮತ್ತು ನೇತ್ರಾವತಿ ನದಿ ತಿರುವು ಯೋಜನೆ ಬಗ್ಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಪುಷ್ಪರಾಜ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಪ್ರಾಸ್ತಾವಿಸಿದರು. ಪತ್ರಕರ್ತ ಆರ್.ಎನ್. ಪೂವಣಿ ಸ್ವಾಗತಿಸಿದರು. ಸಂಘದ ಜತೆ ಕಾರ್ಯದರ್ಶಿ ವಿಲಿಯಂ ಸೋನ್ಸ್ ವಂದಿಸಿದರು. ಕಾರ್ಯದರ್ಶಿ ಪಿ.ಪಿ.ಜೋಯಿ ಕಾರ್ಯಕ್ರಮ ನಿರೂಪಿಸಿದರು.





