ಸಜಂಕಾಡಿ ಶಾಲೆಗೆ 2ನೆ ಬಾರಿ ಮುಚ್ಚುವ ಭೀತಿ

ಪುತ್ತೂರು, ಸೆ.4: ತಾಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿನ ಸರಕಾರಿ ಹಿ.ಪ್ರಾ. ಶಾಲೆ ಮತ್ತೆ ಮುಚ್ಚುವ ಭೀತಿಯಲ್ಲಿದೆ. 10 ವರ್ಷಗಳ ಹಿಂದೆ ಮಕ್ಕಳಿಲ್ಲದ ಕಾರಣ ಮುಚ್ಚಿದ್ದ ಶಾಲೆಯನ್ನು ಊರವರು ಶ್ರಮಪಟ್ಟು ಪುನರಾರಂಭಿಸಿದ್ದರು. ಇದೀಗ ಮತ್ತೆ ಈ ಶಾಲೆ ಶಾಶ್ವತವಾಗಿ ಮುಚ್ಚುವ ಭೀತಿಯಲ್ಲಿದೆ.
1965ರಲ್ಲಿ ನಿರ್ಮಾಣಗೊಂಡ ಈ ಶಾಲೆಯಲ್ಲಿ ಪ್ರಾರಂಭದ ದಿನಗಳಲ್ಲಿ ಮಕ್ಕಳು ಗರಿಷ್ಠ ಸಂಖ್ಯೆಯಲ್ಲಿದ್ದರು. ಬಳಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಲೇ 2005ರಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು. ಶಾಲೆ ಮುಚ್ಚಿದ ಕಾರಣ ಸ್ಥಳೀಯ ಮಕ್ಕಳಿಗೆ ತೊಂದರೆಯಾಗಿದ್ದನ್ನು ಕಂಡು ಪೋಷಕರು ಮತ್ತೆ ಮಕ್ಕಳನ್ನು ಶಾಲೆಗೆ ಸೇರಿಸಿ ಪುನರಾರಂಭಗೊಳ್ಳುವಂತೆ ಮಾಡಿದ್ದರು.
ಕಳೆದ 10 ವರ್ಷಗಳಿಂದ 1ರಿಂದ 7ನೆ ತರಗತಿವರೆಗೆ ಒಬ್ಬ ಶಿಕ್ಷಕ ಪಾಠ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂದು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸತೊಡಗಿದ್ದು, ಈ ಬಾರಿ ಕೇವಲ 23 ಮಕ್ಕಳು ಮಾತ್ರ ಉಳಿದುಕೊಂಡಿದ್ದಾರೆ. ಇಷ್ಟಾದರೂ ಶಾಲೆಗೆ ಸಮರ್ಪಕವಾಗಿ ಶಿಕ್ಷಕರ ನೇಮಕವಾಗಿಲ್ಲ. ಶಾಲೆಗೆ ಇಲಾಖೆ ಖಾಯಂ ಶಿಕ್ಷಕರನ್ನು ನೇಮಕ ಮಾಡಿದ್ದಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಬಹುದು. 4 ವರ್ಷಗಳಿಂದ ಒಬ್ಬರೇ ಶಿಕ್ಷಕರು ಏಳನೆ ತರಗತಿಗೆ ಪಾಠ ಮಾಡುತ್ತಿದ್ದರು. ಈ ಬಾರಿ ಅವರು ಹೆರಿಗೆ ರಜೆಯಲ್ಲಿದ್ದು, ಬದಲಿಗೆ ಒಬ್ಬರು ಶಿಕ್ಷಕರು ಬರುತ್ತಿದ್ದಾರೆ. ಅವರು ಸಿಆರ್‌ಪಿ ಆಗಿರುವ ಕಾರಣ ಎಷ್ಟು ದಿನ ಬರುತ್ತಾರೋ ಎಂಬುದು ನಮಗೆ ಗೊತ್ತಿಲ್ಲ. ಶಿಕ್ಷಕರನ್ನು ನೇಮಕ ಮಾಡದಿದ್ದರೆ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸುಂದರ ತಿಳಿಸಿದ್ದಾರೆ.
ಶಿಕ್ಷಕರೇ ಒಪ್ಪುತ್ತಿಲ್ಲ: ಸಜಂಕಾಡಿ ಶಾಲೆಯ ಶಿಕ್ಷಕಿ ಹೆರಿಗೆ ರಜೆಯ ಮೇಲೆ ತೆರಳಿರುವ ಕಾರಣ ಬದಲಿ ಶಿಕ್ಷಕರನ್ನು ಕಳುಹಿಸಲು ಶಿಕ್ಷಣ ಇಲಾಖೆೆ ಆಸಕ್ತಿ ವಹಿಸಿದ್ದರೂ ಶಿಕ್ಷಕರು ಅಲ್ಲಿಗೆ ತೆರಳಲು ಒಪ್ಪುತ್ತಿಲ್ಲ ಎನ್ನುತ್ತಾರೆ ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳು.
ಒಂದನೆ ತರಗತಿಗೆ ಒಂದು ಮಗು: ಈ ಬಾರಿ ಒಂದನೆ ತರಗತಿಗೆ ಒಂದು ಮಗು ಮಾತ್ರ ದಾಖಲಾತಿ ಪಡೆದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಒಂದನೆ ತರಗತಿಗೆ ದಾಖಲಾತಿ ನಡೆಯದೆ ಇದ್ದರೆ ಶಾಲೆ ಮುಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಎಲ್ಲವೂ ಇದೆ: ಈ ಶಾಲೆಯಲ್ಲಿ ಆಟದ ಮೈದಾನ. ಮಧ್ಯಾಹ್ನದ ಬಿಸಿಯೂಟ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೇಕಾದ ಎಲ್ಲ ವ್ಯವಸ್ಥೆಗಳೂ ಇದೆ. ಆದರೆ ಶಾಲೆಯಲ್ಲಿ ಶಿಕ್ಷಕರೆ ಇಲ್ಲದಿದ್ದರೆ ಎಲ್ಲವೂ ಇದ್ದು ಏನು ಪ್ರಯೋಜನ ಎಂಬ ಪ್ರಶ್ನೆ ಪೋಷಕರದ್ದಾಗಿದೆ.





