ಪಾಕ್-ಚೀನಾ ಆರ್ಥಿಕ ಕಾರಿಡಾರ್
ಚೀನಾ ಪ್ರಧಾನಿ ಜೊತೆ ಕಳವಳ ವ್ಯಕ್ತಪಡಿಸಿದ ಮೋದಿ

ಹಾಂಗ್‌ಝೌ,ಸೆ.4: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದುಹೋಗುವ ಚೀನಾ-ಪಾಕ್ ಆರ್ಥಿಕ ಕಾರಿಡಾರ್ (ಸಿಪಿಇಸಿ) ಹಾಗೂ ಪ್ರದೇಶವನ್ನು ಕಾಡುತ್ತಿರುವ ಭಯೋತ್ಪಾದನೆಯ ಪಿಡುಗಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ತನ್ನ ಕಳವಳ ವ್ಯಕ್ತಪಡಿಸಿದ್ದಾರೆ. ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು ಉಭಯ ದೇಶಗಳು, ತಮ್ಮ ನಡುವಿನ ವ್ಯೆಹಾತ್ಮಕ ಬಾಂಧವ್ಯಗಳ ಬಗ್ಗೆ ಸಂವೇದನೆಯಿಂದ ವರ್ತಿಸಬೇಕೆಂದು ಆಗ್ರಹಿಸಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಸಮರವು ರಾಜಕೀಯ ಹಿತಾಸಕ್ತಿಗಳಿಂದ ಪ್ರೇರಿತವಾಗಿರಬಾರದೆಂದು ಮೋದಿ ಈ ಸಂದರ್ಭದಲ್ಲಿ ಅಭಿಪ್ರಾಯಿಸಿದರು.
ಭಾರತ-ಚೀನಾ ನಡುವೆ ಸುದೀರ್ಘ ಬಾಳಿಕೆಯ ದ್ವಿಪಕ್ಷೀಯ ಬಾಂಧವ್ಯವನ್ನು ಖಚಿತಪಡಿಸಲು, ಪರಸ್ಪರರ ಆಶೋತ್ತರಗಳನ್ನು, ಕಾಳಜಿಗಳನ್ನು ಹಾಗೂ ವ್ಯೆಹಾತ್ಮಕ ಹಿತಾಸಕ್ತಿಗಳನ್ನು ಗೌರವಿಸಬೇಕಾದ ಅಗತ್ಯವಿದೆಯೆಂದು ಪ್ರಧಾನಿ ಪ್ರತಿಪಾದಿಸಿದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 46 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಚೀನಾ-ಪಾಕ್ ಆರ್ಥಿಕ ಕಾರಿಡಾರ್(ಸಿಪಿಇಸಿ) ಬಗ್ಗೆ ಭಾರತದ ಕಳವಳವನ್ನು ಮೋದಿ ಅವರು ಈ ಸಂದರ್ಭದಲ್ಲಿ ಚೀನಾದ ಅಧ್ಯಕ್ಷರಿಗೆ ಮನವರಿಕೆ ಮಾಡಿದರು.
ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಮೂಲಕ ಪಾಕಿಸ್ತಾನದ ಗ್ವಾದರ್ ಬಂದರ್‌ನಿಂದ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತದ ಕಾಶ್‌ಘರ್‌ಗೆ ರೈಲು, ರಸ್ತೆ ಸಂಪರ್ಕವನ್ನು ಏರ್ಪಡಿಸಲಾಗುತ್ತದೆ. ಅಲ್ಲದೆ ತೈಲ ಹಾಗೂ ನೈಸರ್ಗಿಕ ಅನಿಲದ ಪೂರೈಕೆಗೆ ಪೈಪ್‌ಲೈನ್‌ಗಳನ್ನು ಕೂಡಾ ಸ್ಥಾಪಿಸಲಾಗುವುದು.
ಎರಡು ದಿನಗಳ ಜಿ20 ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಚೀನಾ ಪ್ರವಾಸ ಕೈಗೊಂಡಿದ್ದಾರೆ.







