ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ವೀಡಿಯೊ ಸರ್ವೇಕ್ಷಣೆ
ಪಣಜಿ, ಸೆ.4: ಕೊಂಕಣ ರೈಲ್ವೆ ಮಾರ್ಗದ ವ್ಯಾಪ್ತಿಯ ಕರ್ನಾಟಕದ ಕಾರವಾರದಿಂದ ಮಹಾರಾಷ್ಟ್ರದ ರತ್ನಗಿರಿವರೆಗಿನ ಎಲ್ಲ ನಿಲ್ದಾಣಗಳಲ್ಲಿ ಇದೀಗ ವೀಡಿಯೊ ಸರ್ವೇಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ.
ರೈಲ್ವೆ ಸಚಿವ ಸುರೇಶ್ ಪ್ರಭು ಅವರು ರವಿವಾರ ಕೊಂಕಣ ರೈಲ್ವೆ ನಿಗಮ ವ್ಯಾಪ್ತಿಯ 17 ನಿಲ್ದಾಣಗಳಲ್ಲಿ ಇಂಟರ್ನೆಟ್ ಶಿಷ್ಟಾಚಾರ ಆಧರಿತ ವೀಡಿಯೊ ಸರ್ವೇಕ್ಷಣೆ ವ್ಯವಸ್ಥೆಯನ್ನು ಮಡಗಾಂವ್‌ನಲ್ಲಿರುವ ಕೇಂದ್ರ ನಿಯಂತ್ರಣ ಕೊಠಡಿಯಲ್ಲಿ ಉದ್ಘಾಟಿಸಿದರು.
ಮಡಗಾಂವ್ ಮಾತ್ರವಲ್ಲದೇ ಕಾರವಾರ ವ್ಯಾಪ್ತಿಯ ಥಿವಿಂ ನಿಲ್ದಾಣಗಳಲ್ಲಿ ಈಗಾಗಲೇ ಸಿಸಿಟಿವಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಡಗಾಂವ್ ರೈಲು ನಿಲ್ದಾಣದಲ್ಲಿ ಪ್ರಮುಖ ಸಮಾರಂಭ ನಡೆಯಿತು. ಇದೇ ಸಂದರ್ಭದಲ್ಲಿ ಸಚಿವರು ದಕ್ಷಿಣ ಗೋವಾದ ದವೋರ್ಲಿಂನಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಹೊಸದಾಗಿ ವೀಡಿಯೊ ಸರ್ವೇಕ್ಷಣೆ ವ್ಯವಸ್ಥೆಯನ್ನು ಹೊಂದಿರುವ ನಿಲ್ದಾಣಗಳೆಂದರೆ, ರತ್ನಗಿರಿ ವಿಭಾಗದ ಕೊಲಾಡ್, ಮಡಗಾಂವ್, ಖೇಡ್, ಚಿಪ್ಳೂಣ್, ರತ್ನಗಿರಿ, ಕಂಕವಲಿ, ಕುಡಲ್, ಸಿಂಧುದುರ್ಗ ಹಾಗೂ ಸಾವಂತವಾಡಿ, ಪೆರ್ಮೆವ್, ಕರ್ಮಾಲಿ, ಕಣಕೋಣ, ಕಾರವಾರ, ಗೋಕರ್ಣ, ಭಟ್ಕಳ, ಉಡುಪಿ, ಸುರತ್ಕಲ್.
ಪ್ರತಿ ನಿಲ್ದಾಣಗಳಲ್ಲಿ 12 ರಿಂದ 16 ಡೋಮ್ ಮಾದರಿಯ ಹಾಗೂ ಪೆಟ್ಟಿಗೆ ಮಾದರಿಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು 30 ದಿನಗಳ ಕಾಲ ಚಿತ್ರೀಕರಣ ಮಾಡುವ ಸಾಮರ್ಥ್ಯ ಹೊಂದಿದ್ದು, ಪ್ರತಿ ನಿಲ್ದಾಣಗಳಲ್ಲಿ ಪ್ರವೇಶದ್ವಾರ, ಲಾಬಿ, ಪ್ಲಾಟ್‌ಫಾರಂ, ಟಿಕೆಟ್ ಬುಕ್ಕಿಂಗ್ ಕೌಂಟರ್ ಹಾಗೂ ಇತರ ಸ್ಥಳಗಳಲ್ಲಿ ಈ ವ್ಯವಸ್ಥೆ ಇರುತ್ತದೆ. ಒಂಬತ್ತು ಆರ್‌ಪಿಎಪ್ ಹೊರ ಠಾಣೆಗಳಿಗೆ ಎಲ್‌ಇಡಿ ಮಾನಿಟರ್‌ಗಳನ್ನು ಕೂಡಾ ಒದಗಿಸಲಾಗಿದ್ದು, ಇದು ಭದ್ರತಾ ವ್ಯವಸ್ಥೆಯ ನಿಗಾ ವಹಿಸಲು ಸಹಕಾರಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಗೋವಾ ಸರಕಾರ ಹಾಗೂ ಕೊಂಕಣ ರೈಲ್ವೆ ಜೊತೆಯಾಗಿ ಐದು ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲು ಒಪ್ಪಿಗೆ ನೀಡಿವೆ. ಶೇ.50ರಷ್ಟು ವೆಚ್ಚವನ್ನು ನಿಗಮ ಹಾಗೂ ಉಳಿದ ವೆಚ್ಚವನ್ನು ಸರಕಾರ ನಿಭಾಯಿಸಲಿವೆ.







