ದನ ಸಾಗಾಟಗಾರರಿಗೆ ಸರಿಯಾಗಿ ಹೊಡೆಯಿರಿ, ಆದರೆ..
ಗೋರಕ್ಷಕರಿಗೆ ವಿಹಿಂಪ ನಾಯಕನ ಮಾರ್ಗದರ್ಶನ

ಮೀರಠ್, ಸೆ.5: ’ದನ ಸಾಗಾಟಗಾರರಿಗೆ ಸರಿಯಾಗಿ ಹೊಡೆಯಿರಿ, ಆದರೆ ಮೂಳೆ ಮುರಿಯಬೇಡಿ’ - ಇದು ವಿಶ್ವಹಿಂದೂ ಪರಿಷತ್‌ನ ಗೋರಕ್ಷಾ ವಿಭಾಗದ ಮುಖಂಡರು ಯುವ ಗೋರಕ್ಷಕರಿಗೆ ನೀಡಿದ ಮಾರ್ಗದರ್ಶನ.
ಪಶ್ಚಿಮ ಉತ್ತರ ಪ್ರದೇಶದ ಬ್ರಜ್ ಹಾಗೂ ಉತ್ತರಾಖಂಡದ ಪ್ರಮುಖ ಗೋರಕ್ಷಕರ ಸಮಾವೇಶದಲ್ಲಿ ಮಾತನಾಡಿದ, ವಿಎಚ್‌ಪಿ ಗೋರಕ್ಷಕ ವಿಭಾಗದ ಕೇಂದ್ರೀಯ ಸಮಿತಿ ಸದಸ್ಯ ಖೇಮಚಂದ್, "ವಿಎಚ್‌ಪಿ ಕಾರ್ಯಕರ್ತರಲ್ಲದ ಸ್ವಯಂಸೇವಕರನ್ನೂ ಪಟ್ಟಿ ಮಾಡಿ. ಈ ಮೂಲಕ ಗೋರಕ್ಷಕರ ಸೇನೆಯನ್ನು ಎದುರಿಸಿ ಯಾರೂ ಅಕ್ರಮ ಮಾರಾಟಕ್ಕಾಗಿ ಗೋ ಕಳ್ಳಸಾಗಾಣಿಕೆ ಮಾಡುವ ಧೈರ್ಯ ತೋರುವುದು ಬೇಡ" ಎಂದು ಹೇಳಿದರು. ಗೋಸಂರಕ್ಷಣೆ ಮೇಕ್ ಇನ್ ಇಂಡಿಯಾ ಅಲ್ಲ; ರಾಷ್ಟ್ರರಕ್ಷಣೆ ಎಂದು ಸ್ಪಷ್ಟಪಡಿಸಿದರು.
"ಗೋಸಂರಕ್ಷಣೆ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಅವರು ಹೇಳಿದ್ದ ಎಲ್ಲ ಅಂಶಗಳನ್ನು ನಾನು ಒಪ್ಪುವುದಿಲ್ಲ. ಆದರೆ ಕಾನೂನನ್ನು ನಮ್ಮ ಕೈಗೆ ತೆಗೆದುಕೊಳ್ಳಬಾರದು ಎನ್ನುವುದನ್ನು ಒಪ್ಪುತ್ತೇನೆ. ಸಾಮಾನ್ಯವಾಗಿ ಕಾರ್ಯಕರ್ತರಿಗೆ, ದನ ಸಾಗಿಸುವವರಿಗೆ ಹೊಡೆಯಿರಿ; ಆದರೆ ಮೂಳೆ ಮುರಿಯಬೇಡಿ ಎಂದು ಸಲಹೆ ಮಾಡುತ್ತೇನೆ" ಎಂದರು.
"ಕೆಲವರು ಗೋಸಾಗಾಟದಾರರಿಗೆ ಹೊಡೆಯುವ ವೀಡಿಯೋ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ತಮ್ಮ ಸಾಹಸ ಪ್ರದರ್ಶಿಸಿಕೊಳ್ಳುತ್ತಾರೆ. ಆದರೆ ಅದನ್ನು ಮಾಡುವ ಅಗತ್ಯವಿಲ್ಲ ಎಂದು ಖೇಮ್‌ಚಂದ್ ಸ್ಪಷ್ಟಪಡಿಸಿದರು.
ಕಳೆದ ವರ್ಷ ಬಜರಂಗ ದಳ ಸದಸ್ಯ ವಿವೇಕ್ ಪ್ರೇಮಿ, ಗೋಹಂತಕ ವ್ಯಕ್ತಿಗೆ ಶಾಮ್ಲಿ ಎಂಬಲ್ಲಿ ಹೊಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಪ್ರೇಮಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ದೂರು ದಾಖಲಿಸಲಾಗಿತ್ತು.





