ಅಲೆ ಮಾರಿ ಮಕ್ಕಳ ಪಾಲಿನ ಕ್ರಿಸ್ತ ಜಾರ್ಜ್ ಸಲ್ಡಾನ
ಶಿಕ್ಷಕರ ದಿನಾಚರಣೆ ವಿಶೇಷ

ಗೆಳೆಯ ಜಾರ್ಜ್ ಸಲ್ಡಾನ ಯಾರೊಂದಿಗೂ ಹೆಚ್ಚು ಮಾತಾಡುವುದಿಲ್ಲ. ಸಂಕೋಚ ಸ್ವಭಾವದ ಸರಳ ವ್ಯಕ್ತಿ. ಶಿವಮೊಗ್ಗದ ನೂರಾರು ಜನಪರ ಹೋರಾಟಗಳಲ್ಲಿ ನೆರಳಿನ ಹಾಗೆ ದುಡಿಯುವ ಜಾರ್ಜ್ ಸದಾ ನೇಪಥ್ಯದಲ್ಲೇ ಇರಲಿಚ್ಛಿಸುತ್ತಾರೆ. ತಾವು ನಂಬಿರುವ ಪತ್ರಿಕೆಯ ಸಣ್ಣ ಕೆಲಸವನ್ನೇ ಶ್ರದ್ಧೆಯಿಂದ ಮಾಡುತ್ತಾರೆ. ಅನ್ಯರಿಗೆ ಬಂದ ಕಷ್ಟಗಳು ತಮಗೇ ಬಂದಂತೆ ಚಡಪಡಿಸುತ್ತಾರೆ. ಜೀವನದಲ್ಲಿ ಹಾಸುಹೊದ್ದುಕೊಳ್ಳುವಷ್ಟು ಸ್ವಂತದ ಬೇಗುದಿಗಳು ಅವರಿಗಿದ್ದರೂ, ಅದನ್ನೆಂದೂ ತೋರಗೊಡುವುದಿಲ್ಲ. ಶ್ರಮಪಟ್ಟು ದುಡಿಯುವ ಬಡಜನರ ಬವಣೆಗಳಿಗೆ ಸ್ಪಂದಿಸಲು ಹೆಣಗಾಡುತಿರುತ್ತಾರೆ. ಎಂದೂ ತಮ್ಮ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಮನದಲ್ಲಿ ದುಃಖದ ಸಮುದ್ರವೇ ಇದ್ದರೂ ಗೊಣಗಾಡುವುದಿಲ್ಲ. ಜಾರ್ಜ್ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ವಸ್ತುಗಳು ಎರಡು ಮಾತ್ರ. ಒಂದು ಪುಸ್ತಕಗಳು. ಮತ್ತೊಂದು ಪ್ರೇಯಸಿಯಂತೆ ಅಂಟಿಕೊಂಡಿ ರುವ ಲಟಾರಿ ಸೈಕಲ್ಲು. ದಮನಿತರ ಸಂಕಷ್ಟ ಗಳನ್ನು ಪರಿಹರಿಸಲು ಹೆಣಗಾಡುವ ಜಾರ್ಜ್ ನನಗೆ ಆಧುನಿಕ ಕ್ರಿಸ್ತನಂತೆ ಕಾಣುತ್ತಾರೆ.
ಜಾರ್ಜ್ ಗೆ ಮದುವೆ ಯಾಕೋ ಇಷ್ಟವಾಗ ಲಿಲ್ಲ. ಕಾರಣ ಕೇಳಿದರೆ ಇವತ್ತಿಗೂ ಅವರು ಬಾಯಿ ಬಿಡುವುದಿಲ್ಲ. ಈ ಶುದ್ಧ ಮನಸ್ಸಿನ ಜಾರ್ಜ್ ಗೆ, ಎಲಿಜಬತ್ ಎಂಬ ತಂಗಿಯಿದ್ದಾರೆ. ಎಲ್ಲರೂ ಪ್ರೀತಿಯಿಂದ ಅವರನ್ನು ಬೇಬಿ ಎಂದು ಕರೆಯುತ್ತಾರೆ. ಈ ಬೇಬಿ ಒಂದು ಶಾಲೆಯಲ್ಲಿ ಶಿಕ್ಷಕಿ. ಅಣ್ಣನ ಕಂಡರೆ ಬೇಬಿಗೆ ತುಂಬಾ ಗೌರವ. ಮನೆಯಲ್ಲಿ ಕಾಯಿಲೆಯಿಂದ ಬಳಲುವ ತಮ್ಮನೊ ಬ್ಬನಿದ್ದಾನೆ. ಅವನ ಆರೋಗ್ಯ ಏರುಪೇರಾಗು ತತಿಲೇ ಇರುತ್ತಿದೆ. ಅವನನ್ನು ಮಗುವಿನಂತೆ ನೋಡಿಕೊಳ್ಳಬೇಕು. ಅಮ್ಮ ಸಾಯುವಾಗ “ಬೇಬಿ ನಿನ್ನ ಮಡಿಲಿಗೆ ನನ್ನಿಬ್ಬರು ಮಕ್ಕಳನ್ನು ಹಾಕಿಹೋಗುತ್ತಿದ್ದೇನೆ. ಅನ್ನಕ್ಕಾಗಿ ಅವರಿಬ್ಬರು ಕಂಡವರ ಮನೆಗೆ ಹೋಗಬಾರದು. ನಿನ್ನ ಗಂಡ, ನಿನ್ನ ಮಗನೂ ಇಲ್ಲೇ ಇದ್ದು ಅವರನ್ನು ಕೊನೇ ತನಕ ಚೆನ್ನಾಗಿ ಸಾಕುತ್ತೀರಿ ಅಂತ ಮಾತು ಕೊಡು”ಎಂದು ಆಣೆ ಪಡೆದೇ ಪ್ರಾಣ ಬಿಟ್ಟಿದ್ದಾರೆ. ಆ ಮಾತನ್ನು ಬೇಬಿ ಇನ್ನೂ ಮರೆತಿಲ್ಲ. ಈಗ ಆ ಇಡೀ ಕುಟುಂಬಕ್ಕೆ ತಂಗಿ, ಅಕ್ಕ, ತಾಯಿ, ಹೆಂಡತಿ ಎಲ್ಲಾ ಬೇಬಿಯೇ. ಅಣ್ಣ, ತಮ್ಮನ ಆರೈಕೆ ಮಾಡುತ್ತಲೇ ಜೀವ ಸವೆಸುತ್ತಿರುವ ಬೇಬಿ ಎಂದೂ ನಗೆ ಕಳೆದುಕೊಳ್ಳದ ಹೆಣ್ಣು . ನೋವಿನಿಂದ ಗಿಜಿಗುಡುವ ತಮ್ಮನನ್ನೂ, ಸಮಾಜ ಸೇವೆಗೆ ಜೀವ ಮುಡಿಪಾಗಿಟ್ಟ ಅಣ್ಣನನ್ನು ಹೆತ್ತ ಕುಡಿಗಳಂತೆ ಸಲಹುತ್ತಿದ್ದಾರೆ.
ನಮ್ಮ ಜಾರ್ಜ್ ಸಂಜೆಯಾದರೆ ಸೈಕಲ್ ತೆಗೆದುಕೊಂಡು ಊರ ಹೊರಗೆ ಚಲಿಸುತ್ತಾರೆ. ಅಲ್ಲಿ ಟೆಂಟು, ಗುಡಿಸಲು ಹಾಕಿಕೊಂಡಿರುವ ಅಲೆಮಾರಿ ಜನರಿದ್ದಾರೆ. ಧಾರಾವಿಯ ಸ್ಲಂನಂತೆ ಕಾಣುವ ಅಲ್ಲಿನ ಪುಟ್ಟ ಹಟ್ಟಿಗಳು ಕೆಸರಲ್ಲಿ ಹೂತು ಹೋಗಿವೆ. ಜಾರ್ಜ್ ಅಲ್ಲಿರುವ ಒಂದು ಕಟ್ಟೆಯ ಮೇಲೆ ದಿನಾ ಹೋಗಿ ಕೂರುತ್ತಾರೆ. ಅಲ್ಲಿ ಆಡುವ ಚಿಳ್ಳೆಪಿಳ್ಳೆಗಳೆಲ್ಲಾ ಜಾರ್ಜ್ ಬಂದದ್ದು ಕಂಡು ತಮ್ಮ ಟೆಂಟ್ ಗಳಿಗೆ ಓಡುತ್ತಿವೆ. ಸ್ಲೇಟು, ಪುಸ್ತಕ, ಬಳಪ ಅವುಚಿಕೊಂಡು ಜಾರ್ಜ್ ಗೆ ಸುತ್ತ ಶಿಸ್ತಾತಿಗಿ ಕೂರುತ್ತಿವೆ. ಆ ಕಟ್ಟೆ ಹದಿನೈದು ವರ್ಷಗಳಿಂದ ಅಲ್ಲಿನ ಮಕ್ಕಳಿಗೆ ಪಾಠಶಾಲೆ ಎನಿಸಿದೆ. ಬೆಲ್ಲು, ಬಿಲ್ಲು, ಬಿಲ್ಡಿಂಗು ಇಲ್ಲದೆ ಇಲ್ಲಿ ಪಾಠಗಳು ನಡೆಯುತ್ತಿವೆ. ಕತ್ತಲಾಗುವುದರೊಳಗೆ ಜಾರ್ಜ್ ತಮ್ಮ ಪಾಠಗಳನ್ನು ಸರಸರ ಮುಗಿಸಬೇಕು. ಸೂರ್ಯನೇ ಇಲ್ಲಿನ ಜನರ ಕೊನೆ ಬೆಳಕು.
ಸಂಜೆ ಎನ್ನುವುದು ಹಟ್ಟಿಯ ಪಾಲಿಗೆ ಗಡಿ ಬಿಡಿ ಸಮಯ. ಹೆಣ್ಣು ಮಕ್ಕಳು ಸಾರಿಗೆ ಖಾರ ಕಡೆಯುತ್ತಾ, ಮತ್ತೊಂದು ಕಡೆ ಅನ್ನ ಬೇಯಿಸುತ್ತಾ ಬಿಝಿಯಾಗಿರುತ್ತಾರೆ. ದುಡಿದು ಬಂದ ಗಂಡಸರು ಮೀಟಿಂಗ್ ನಲ್ಲಿ ಮಗ್ನರಾಗಿರುತ್ತಾರೆ. ಅಲ್ಲೆಲ್ಲೋ ಜಗಳ, ಇಲ್ಲೆಲ್ಲೋ ಕೂಗಾಟ, ಪರಸ್ಪರ ಮಾರಾಮಾರಿ ಶುರುವಾಗಿರುತ್ತದೆ. ಇಂಥ ಕಡೆ ಜಾರ್ಜ್ ಶಾಂತಚಿತ್ತರಾಗಿ ಕೂತು ನಿನ್ನೆ ಹೇಳಿ ಕೊಟ್ಟ ಪಾಠ ಒಪ್ಪಿಸಿಕೊಳ್ಳುತ್ತಾ, ಸ್ಲೇಟು ಹಿಡಿದು ಅಆತಿದ್ದಿಸುತ್ತಾ ಬೇಗ ಕಲಿಸುವಲ್ಲಿ ತಲ್ಲೀನರಾಗಿರುತ್ತಾರೆ. ಕತ್ತಲೋ, ಸಂಜೆ ಮಳೆಯೋ, ಶುರುವಾಗುವುದರೊಳಗೆ ಅಲ್ಲಿನ ಅಡುಗೆಗಳು, ಪಾಠಗಳು ಎಲ್ಲವೂ ಮುಗಿಯಬೇಕು. ಪಾಠ ಮುಗಿದ ಮೇಲೆ ಜಾರ್ಜ್ ಅಲ್ಲಿನ ಜನರ ಕಷ್ಟಗಳನ್ನು ಆಲಿಸುತ್ತಾರೆ.
ಇಲ್ಲಿನ ವಿದ್ಯಾರ್ಥಿಗಳು ಜಾರ್ಜ್ ರ ಶಿಷ್ಯರಲ್ಲ, ಒಡಲ ಮಕ್ಕಳಿದ್ದಂತೆ. ಅವರ ಓದು, ಬಟ್ಟೆ, ಪುಸ್ತಕ, ಪೆನ್ನು, ಬಳಪಕ್ಕಾಗಿ ತಮ್ಮ ತುಂಡು ದುಡಿಮೆಯನ್ನೇ ಅವರು ಸದ್ದಿಲ್ಲದೆ ಸವೆಸುತ್ತಿದ್ದಾರೆ. ಈ ಮಕ್ಕಳು ಓದುವ ಶಾಲೆಗೆ ಹೋಗಿ ಅವುಗಳ ಪ್ರಗತಿಯನ್ನು ವಿಚಾರಿಸುತ್ತಾರೆ. ದಿನವಿಡೀ ಅಲೆಮಾರಿಗಳಾಗಿ ಅನ್ನ ಹುಡುಕುತ್ತಾ ನಲುಗುವ ಆ ಮಕ್ಕಳ ತಂದೆ ತಾಯಿಗಳು ಜಾರ್ಜ್ ಎಂಬ ಅವಧೂತ ಇರುವುದರಿಂದ ಕೊಂಚ ನಿರಾಳರಾಗಿದ್ದಾರೆ. ಜಾರ್ಜ್ ಇಲ್ಲದೆ ಹೋಗಿದ್ದರೆ, ಆ ಮಕ್ಕಳ್ಯಾರು ಶಾಲೆಯ ಮುಖ ಕಾಣುತ್ತಿರಲಿಲ್ಲ.
ಈ ಮನುಷ್ಯ ದೇವರು, ಧರ್ಮ, ಜಾತಿ, ಕುಲ ಇದ್ಯಾವುದನ್ನೂ ನಂಬುವುದಿಲ್ಲ. ಪ್ರಶಂಸೆ ಇಷ್ಟಪಡುವುದಿಲ್ಲ. ನೆಂಟರು, ಬಂಧು ಬಳಗದವರ ಸಭೆ ಸಮಾರಂಭಗಳ ಕಡೆ ಸುಳಿಯುವುದಿಲ್ಲ. ತನ್ನವರನ್ನೆಲ್ಲಾ ಮರೆತು, ಆ ಬಡ ಮಕ್ಕಳ ಭವಿಷ್ಯವನ್ನು ಚಿಂತಿಸುವ ಜಾರ್ಜ್ ನನಗೆ ವಿಶೇಷ ಅನ್ನಿಸುತ್ತಾರೆ. ಮೊನ್ನೆ ಅವರ ಸಂಬಂಧಿಕರೊಬ್ಬರು ತಾವು ಮದುವೆಯಾದ ಇಪ್ಪತ್ತೈದು ವರ್ಷಗಳ ಸಮಾರಂಭ ಇಟ್ಟುಕೊಂಡಿದ್ದರು. ಜಾರ್ಜ್ ಅನ್ನು ಬನ್ನಿ ಎಂದು ಕರೆಯುತ್ತಿದ್ದರು. ಆಗ ಜಾರ್ಜ್ ಹೇಳಿದ್ದು ನನಗಿನ್ನೂ ನೆನಪಿದೆ. ೞನನ್ನ ಇಪ್ಪತ್ತೈದು ಮಕ್ಕಳಿದ್ದಾರೆ. ಅವರಿಗೆ ಆತಿಥ್ಯ ಮಾಡುತ್ತೀರಿ ಅನ್ನೋದಾದ್ರೆ ಮಾತ್ರ ಬರ್ತೀನಿೞಎಂದು ಬಿಟ್ಟರು. ಬಂದವರೂ ಅಷ್ಟೆ. ಲೇಬರ್ ಯೂನಿಯನ್ ಕಟ್ಟಿ ಬೆಳೆಸಿದವರು. ಬಡವರ ನೋವು ಬಲ್ಲವರು. ಹೀಗಾಗಿ ಅವರೂ ಸಂತೋಷದಿಂದ ಒಪ್ಪಿದರು. ಯಾರೋ ಹೆತ್ತ ಮಕ್ಕಳನ್ನು ತಾವೇ ಹೀಗೆ ಲಾಲಿಸಿ ಪಾಲಿಸಿ, ಓದಿಸಿ, ನಲಿಯುತ್ತಿರುವ ಜಾರ್ಜ್ ಒಬ್ಬ ಗ್ರೇಟ್ ಕ್ಲಾಸ್ ಟೀಚರ್. ಸಂಬಳಕ್ಕಾಗಿ ವೃತ್ತಿ ಮಾಡುತ್ತಿರುವ ನಾವು ಹೆಸರಿಗಷ್ಟೇ ಮೇಷ್ಟ್ರುಗಳು.







