ಪಕ್ಷದಿಂದ ‘ಬಹಿಷ್ಕೃತ’ ಟೈಮ್ಸ್ ನೌ ಜೊತೆ ಮಾತನಾಡಿದಮುಖಂಡನ ವಿರುದ್ಧ ಕ್ರಮ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ, ಸೆ.5: ಕಾಂಗ್ರೆಸ್ ಪಕ್ಷದಿಂದ ‘ಅನ್ ಫ್ರೆಂಡ್ಲಿ’ ಚಾನಲ್ ಎಂದು ಪರಿಗಣಿಸಲ್ಪಟ್ಟು ಅನಧಿಕೃತವಾಗಿ ಬಹಿಷ್ಕೃತಗೊಂಡಿರುವ ಟೈಮ್ಸ್ ನೌ ಚಾನಲ್ಜತೆ ಮಾತನಾಡಿದ ಪಕ್ಷದ ಹರ್ಯಾಣ ಘಟಕದ ಪ್ರಧಾನ ಕಾರ್ಯದರ್ಶಿಖಝಾನ್ ಸಿಂಗ್ ಅವರನ್ನು ಪಕ್ಷ ಉಚ್ಚಾಟಿಸಿದೆ.
ಈ ಬಗ್ಗೆ ಆದೇಶ ಜಾರಿಗೊಳಿಸಿರುವ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವರ್ ತನ್ನ ಆದೇಶದಲ್ಲಿ ಸಿಂಗ್ ಅವರು ಟೈಮ್ಸ್ ನೌ ಪತ್ರಕರ್ತರೊಂದಿಗೆ ಮಾತನಾಡಿರುವುದು ‘ಅಶಿಸ್ತಿನ ನಡೆ’ಯೆಂದು ಪಕ್ಷ ತೀರ್ಮಾನಿಸಿದೆಯೆಂದಿದ್ದಾರೆ. ಸಿಂಗ್ ಅವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದವರು.
ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷ ಟೈಮ್ಸ್ ನೌ ಚಾನಲ್ ನ ‘ಚರ್ಚಾ’ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದೆ. ಟೈಮ್ಸ್ ನೌ ಮೂಲಗಳ ಪ್ರಕಾರ ಯಾವುದೇ ಕಾಂಗ್ರೆಸ್ ನಾಯಕ ಚಾನಲ್ ನ ಪ್ರೈಮ್ ಟೈಮ್ ನ್ಯೂಸ್ ಅವರ್ ನಲ್ಲಿ ಭಾಗವಹಿಸದೇ ಇದ್ದರೂ ಅವರು ಕೆಲ ವಿಚಾರಗಳ ಬಗ್ಗೆ ಫೋನ್ ಮೂಲಕ ತಮ್ಮ ಅಭಿಪ್ರಾಯ ನೀಡುತ್ತಿದ್ದಾರೆಂದು ಹೇಳಿದೆ.
‘‘ಖಝಾನ್ ಸಿಂಗ್ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಪಕ್ಷದ ಯಾರೇ ಆದರೂ ಅವರಾಗಿಯೇ ತೀರ್ಮಾನಿಸಿ ಯಾವುದೇ ಟಿವಿ ಚಾನಲ್ ಜತೆ ಮಾತನಾಡುವ ಹಾಗಿಲ್ಲ. ಸಿಂಗ್ ಅವರು ಪಕ್ಷದ ಅನುಮತಿ ಕೇಳದೆ ತಮ್ಮದೇ ನಿರ್ಧಾರ ಕೈಗೊಂಡು ಚಾನಲ್ ವರದಿಗಾರರ ಬಳಿ ಮಾತನಾಡಿದ್ದಾರೆ’’ಎಂದು ಅಶೋಕ್ ತನ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಭೂವ್ಯವಹಾರಗಳಿಗೆ ಸಂಬಂಧಿಸಿದ ಢಿಂಗ್ರಾ ಆಯೋಗ ವರದಿಯ ಕುರಿತಾಗಿ ಟೈಮ್ಸ್ ನೌ ವರದಿಗಾರರು ಸಿಂಗ್ ಅವರ ಅಭಿಪ್ರಾಯ ಪಡೆದುಕೊಂಡಿದ್ದರೆಂದು ತಿಳಿದು ಬಂದಿದೆ.





