ಪವಿತ್ರ ಕಾಬಾದ ಹೊದಿಕೆ ‘ಕಿಸ್ವಾ’ ಹಸ್ತಾಂತರ

ಜಿದ್ದಾ, ಸೆ.5: ಒಂದು ವರ್ಷದಲ್ಲಿ ಸೂಕ್ಷ್ಮವಾದ ನೇಯ್ಗೆಯಿಂದ ತಯಾರಿಸಿದ ಮಕ್ಕಾದಲ್ಲಿರುವ ಪವಿತ್ರ ಕಾಬಾ ಭವನಕ್ಕೆ ಹೊದಿಸುವ ಹೊದಿಕೆ(ಕಿಸ್ವಾ) ಹಸ್ತಾಂತರ ನಡೆದಿದೆ.
ಮಕ್ಕಾದ ಕಿಸ್ವಾ ಫ್ಯಾಕ್ಟರಿ ಮುಖ್ಯಸ್ಥ ಡಾ.ಮುಹಮ್ಮದ್ ಬಾಜೌದಿಯವರು ಕಿಸ್ವಾವನ್ನು ಮಕ್ಕಾ ವಲಯ ಗವರ್ನರ್ ಮತ್ತು ದೊರೆಯ ಸಲಹೆಗಾರ ಅಮೀರ್ ಖಾಲಿದ್ ಅಲ್ ಫೈಝಲ್‌ಗೆ ಹಸ್ತಾಂತರಿಸಿದ್ದಾರೆ. ಜಿದ್ದ್ದಾ ಗವರ್ನರೇಟ್‌ನಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಎರಡೂ ಹರಮ್‌ಗಳ(ಮಕ್ಕಾ, ಮದೀನ ಪವಿತ್ರ ಮಸೀದಿಗಳ) ಮುಖ್ಯಸ್ಥರು, ಕಾಬಾ ಭವನದ ಕೀಗೊಂಚಲು ಜೋಪಾನವಾಗಿ ಇರಿಸಿಕೊಳ್ಳುವವರಿಗೆ ಕಿಸ್ವಾವನ್ನು ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ದುಲ್‌ಹಜ್ ಒಂಬತ್ತಕ್ಕೆ ಅರಫಾ ದಿನದಂದು ಕಾಬಾಕ್ಕೆ ಹೊಸ ಹೊದಿಕೆಯನ್ನು ಹೊದಿಸಲಾಗುವುದು. ದುಲ್‌ಹಜ್ ಎಂಟರಂದು ಹಳೆಯ ಕಿಸ್ವಾದ ಚಿನ್ನದ ಲೇಪನ ಮಾಡಿದ ಭಾಗಗಳನ್ನು ತೆಗೆಯಲಾಗುವುದು.
''ಎರಡು ಹರಮ್‌ಗಳ ಸೇವೆ ಇಸ್ಲಾಮಿ ಹೊಣೆಗಾರಿಕೆಯಾಗಿದೆ. ಅಲ್ಲಾಹನ ಅತಿಥಿಗಳಾಗಿ ಬರುವ ಲಕ್ಷಾಂತರ ತೀರ್ಥಯಾತ್ರಿಗಳ ಸೇವೆಯ ಕಾರ್ಯದಲ್ಲಿ ಸೌದಿ ಅರೇಬಿಯ ನಿಷ್ಕಳಂಕ ಸೇವೆ ಸಲ್ಲಿಸುತ್ತಿದೆ'' ಎಂದು ಮಕ್ಕಾದ ಗವರ್ನರ್ ಹೇಳಿದ್ದಾರೆ. ಮಕ್ಕಾದ ಹರಮ್ ಮತ್ತು ಇತರ ಪವಿತ್ರ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಸೌಕರ್ಯವನ್ನು ಪರಿಗಣಿಸಿ ನಡೆಸಲಾಗುತ್ತಿರುವ ಕೆಲಸ ಕಾರ್ಯಗಳನ್ನು ಕಾಬಾದ ಕೀಗೊಂಚಲು ಕಾಪಾಡಿರಿಸಿಕೊಳ್ಳುವವರ ಮುಖ್ಯಸ್ಥ ಡಾ.ಸಾಲಿಹ್ ಬಿನ್ ಝೈನ್ ಅಲ್ ಆಬಿದೀನ್ ಅಲ್‌ಶೈಬಿಯವರಿಗೆ ಗವರ್ನರ್ ವಿವರಿಸಿದರು.
ಹಜ್-ಉಮ್ರಾ ಯಾತ್ರಾರ್ಥಿಗಳಿಗೆ ಸೌದಿ ಸರಕಾರ ನೀಡುವ ಮಹತ್ತರ ಸೇವೆಗಳನ್ನು ಎರಡು ಹರಮ್‌ಗಳ ಮುಖ್ಯಸ್ಥರು ಮತ್ತು ಮಕ್ಕಾ ಹರಮ್ ಇಮಾಮ್ ಡಾ. ಅಬ್ದುರ್ರಹ್ಮಾನ್ ಅಸ್ಸುಬೈಸ್ ಈ ಸಂದರ್ದಲ್ಲಿ ಸ್ಮರಿಸಿದ್ದಾರೆ.







