ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಆದೇಶ

ಹೊಸದಿಲ್ಲಿ, ಸೆ.5: ಕಾವೇರಿ ನದಿಯ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಂದಿನ ಹತ್ತು ದಿನಗಳ ಕಾಲ ಪ್ರತಿದಿನ ತಮಿಳು ನಾಡಿಗೆ 15 ಸಾವಿರ ಕ್ಯೂಸೆಕ್(1.29 ಟಿಎಂಸಿ) ನೀರು ಹರಿಸುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.
ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳ ವಾದವನ್ನು ಆಲಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‌ಮನ ದ್ವಿಸದಸ್ಯ ನ್ಯಾಯಪೀಠ ನೀರನ್ನು ಜಲಮಾಪನ ಕೇಂದ್ರ ಬಿಳಿಗುಂಡ್ಲುಗೆ ಹರಿಸುವಂತೆ ಕರ್ನಾಟಕ ಸರಕಾರಕ್ಕೆ ಸೂಚನೆ ನೀಡಿದೆ.
ಈ ಸಂಬಂಧ ಮೇಲ್ವಿಚಾರಣಾ ಸಮಿತಿಯನ್ನು ನಾಲ್ಕು ದಿನಗಳ ಒಳಗಾಗಿ ಸಂಪರ್ಕಿಸುವಂತೆ ತಮಿಳುನಾಡಿಗೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಮುಂದಿನ ವಿಚಾರಣೆಯನ್ನು ಸೆಪ್ಟಂಬರ್ 16ಕ್ಕೆ ಮುಂದೂಡಲಾಗಿದೆ.
ಕಾವೇರಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ನೇತೃತ್ವದ ಮೇಲ್ವಿಚಾರಣಾ ಸಮಿತಿಗೆ ವಹಿಸಿಕೊಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಪರ ವಕೀಲರಾದ ಫಾಲಿ ಎಸ್ ನಾರೀಮನ್ ಮನವಿ ಮಾಡಿದರು.





