ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ

ಉಡುಪಿ, ಸೆ.5: ಉಡುಪಿ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿಂದು ನಡೆಯಿತು.
ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.)ನ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಕರಿಗೆ ಸಿಗುವ ಗೌರವ ಯಾವ ಮಂತ್ರಿಗೂ, ಅಧಿಕಾರಿಗೂ ಸಿಗುವುದಿಲ್ಲ. ವಿದ್ಯಾರ್ಥಿಗಳು ಎಂದಿಗೂ ತಮಗೆ ಶಿಕ್ಷಣ ಕಲಿಸಿದ ಅಧ್ಯಾಪಕರನ್ನು ಮರೆಯುವುದಿಲ್ಲ. ಶಿಕ್ಷಕರಿಗೆ ಸಿಗುವ ಗೌರವ ಎಂದಿಗೂ ಅಬಾಧಿತ ಎಂದರು.
ನಿವೃತ್ತಿಯ ಬಳಿಕ ಎಲ್ಲರೂ ಮಾಜಿಗಳಾಗುತ್ತಾರೆ. ಆದರೆ ಇದಕ್ಕೆ ಶಿಕ್ಷಕರು ಹೊರತಾಗಿರುವುದು ಅವರಿಗಿರುವ ವಿಶೇಷ ಗೌರವವಾಗಿದೆ ಎಂದು ಸಚಿವರು ಅಭಿಪ್ರಾಯಿಸಿದರು. ಇದೇ ಸಂದರ್ಭ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿ. ಶಂಕರ್ ಫ್ಯಾಮಿಲಿ ಟ್ರಸ್‌ಟ್ನ ಪ್ರವರ್ತಕ ಜಿ.ಶಂಕರ್, ತಾಪಂ ಅಧ್ಯಕ್ಷೆ ನಳಿನ್ ಪ್ರದೀಪ್ ರಾವ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಪೌರಾಯುಕ್ತ ಡಿ.ಮಂಜುನಾಥಯ್ಯ, ಜಿಪಂ ಸದಸ್ಯ ಜನಾರ್ದನ ತೋನ್ಸೆ ಮತ್ತಿತರರು ಉಪಸ್ಥಿತರಿದ್ದರು.







