" ಸರಕಾರದ ಟೀಕೆ ದೇಶದ್ರೋಹ ಅಲ್ಲ " : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
.jpg)
ಹೊಸದಿಲ್ಲಿ, ಸೆ. 5 : ಸರಕಾರವನ್ನು ಟೀಕಿಸಿದವರ ವಿರುದ್ಧ ದೇಶದ್ರೋಹ ಅಥವಾ ಮಾನನಷ್ಟದ ಮೊಕದ್ದಮೆ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.
" ಯಾರಾದರೊಬ್ಬರು ಸರಕಾರವನ್ನು ಟೀಕಿಸಿ ನೀಡುವ ಹೇಳಿಕೆಗೆ ದೇಶದ್ರೋಹದ ಅಥವಾ ಮಾನನಷ್ಟ ಕಾನೂನಿನ ಅಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸರ್ವೋಚ್ಛ ನ್ಯಾಯಾಲಯದ ಈ ಹಿಂದಿನ ತೀರ್ಪಿನ ಆಧಾರದಲ್ಲಿ ಭಾರತೀಯ ದಂಡ ಸಂಹಿತೆಯ ( ಐಪಿಸಿ) 124(A) ಸೆಕ್ಷನ್ ನಲ್ಲಿ ಪ್ರಕರಣ ದಾಖಲಿಸಲು ಕೆಲವು ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕಿದೆ ಎಂದು ನಾವು ಸ್ಪಷ್ಟ ಪಡಿಸಿದ್ದೇವೆ " ಎಂದು ನ್ಯಾ. ದೀಪಕ್ ಮಿಶ್ರಾ ಹಾಗು ಯು ಯು ಲಲಿತ್ ಅವರ ಪೀಠ ಹೇಳಿದೆ.
ಎನ್ ಜಿ ಒ ಒಂದರ ಪರವಾಗಿ ಹಾಜರಾದ ವಕೀಲ್ ಪ್ರಶಾಂತ್ ಭೂಷಣ್ ಅವರು " ದೇಶದ್ರೋಹ ಒಂದು ಗಂಭೀರ ಅಪರಾಧ ಹಾಗು ಆ ಕಾನೂನನ್ನು ಈಗ ತೀವ್ರ ದುರ್ಬಳಕೆ ಮಾಡಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲಾಗುತ್ತಿದೆ " ಎಂದು ವಾದಿಸಿದ ಬಳಿಕ ಈ ತೀರ್ಪು ಬಂದಿದೆ.
ಇತ್ತೀಚಿಗೆ ಜೆ ಎನ್ ಯು ವಿದ್ಯಾಥಿ ನಾಯಕ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತಿತರರನ್ನು ದೇಶದ್ರೋಹದ ಪ್ರಕರಣದಡಿ ಬಂಧಿಸಿದ್ದಾಗ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಇದೀಗ ಬಂದಿರುವ ತೀರ್ಪು ಕೇಂದ್ರ ಸರಕಾರಕ್ಕೆ ಇಂತಹ ಹಲವು ಪ್ರಕರಣಗಳಲ್ಲಿ ತೀವ್ರ ಹಿನ್ನಡೆ ಉಂಟು ಮಾಡಿದೆ.







