ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ : ಶಿಕ್ಷಕರಿಗೆ ಶಾಸಕ ಲೋಬೊ ಕರೆ

ಮಂಗಳೂರು, ಸೆ. 5: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಶಿಕ್ಷಕರು, ಮಕ್ಕಳಲ್ಲಿ ಮಾನವೀಯ ವೌಲ್ಯಗಳನ್ನು ಬೆಳೆಲು ಹೆಚ್ಚು ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಶಾಸಕ ಜೆ.ಆರ್.ಲೋಬೊ ಸಲಹೆ ನೀಡಿದ್ದಾರೆ.
ಅವರು ದ.ಕ. ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವುಗಳ ಸಹಯೋಗದಲ್ಲಿ ನಗರದ ಸಂತ ಅಲೋಶಿಯಸ್‌ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆದ ಡಾ.ರಾಧಾಕೃಷ್ಣನ್‌ರವರ ಜನ್ಮ ದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಇಂದಿನ ಯುವಕರೇ ಮುಂದಿನ ಜನಾಂಗವಾಗಿದ್ದಾರೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳಲ್ಲಿ ನಾವು ಮಾನವೀಯತೆ ವೌಲ್ಯಗಳನ್ನು ಬೆಳೆಸಿದರೆ ಮುಂದೆ ಉತ್ತಮ ಜನಾಂಗವನ್ನು ಕಾಣಲು ಸಾಧ್ಯವಿದೆ. ಮಾನವೀಯ ವೌಲ್ಯಗಳನ್ನು ಬೆಳೆಸುವ ಮೂಲಕ ಸಾಮಾಜಿಕ ಶಾಂತಿ, ಸಾಮರಸ್ಯ ಕಾಣಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿಗೋಸ್ಕರ ಮಾನವ ಜೀವಕ್ಕೆ ಬೆಲೆ ನೀಡದ ಯುವಕರಿಂದಾಗಿ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ. ಧರ್ಮಗಳ ನಡುವೆ ದ್ವೇಷದ ಭಾವನೆಯನ್ನು ಮೂಡಿಸಲಾಗುತ್ತಿದೆ. ಮನುಷ್ಯನಾಗಿ ಮಾನವೀಯ ವೌಲ್ಯಗಳು ಇಲ್ಲದರ ಪರಿಣಾಮ ಇಂತಹ ಘಟನೆಗಳು ಮರುಕಳಿಸುತ್ತದೆ ಎಂದು ಅವರು ಹೇಳಿದರು.
ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಶಿಕ್ಷಕರ ಜವಾಬ್ದಾರಿ ಬಹಳಷ್ಟಿದೆ. ಆದರೆ, ಶಿಕ್ಷಕರ ಎದುರು ಸವಾಲುಗಳು ಅಷ್ಟೇ ಇವೆ. ಇವೆಲ್ಲದರ ನಡುವೆ ಶಿಕ್ಷಕರು ತಾಳ್ಮೆಯನ್ನು ಕಳೆದುಕೊಳ್ಳದೆ, ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಶಾಸಕರು ಶಿಕ್ಷಕರಿಗೆ ಸಲಹೆ ನೀಡಿದರು.
ಉತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಪಡೆದ ಶಿಕ್ಷಕರಂತೆ ಶೈಕ್ಷಣಿಕ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿ ಪ್ರಶಸ್ತಿಗೆ ಆಯ್ಕೆಯಾಗದ ಶಿಕ್ಷಕರು ಬಹಳಷ್ಟು ಮಂದಿ ಇರಬಹುದು. ಅಂತಹ ಶಿಕ್ಷಕರ ಸೇವೆ ಗುರುತಿಸದೇ ಇರಬಹುದು. ಇದರಿಂದ ಬೇಸರಪಡದೆ, ತಮ್ಮ ಸೇವೆಯನ್ನು ಮುಂದುವರಿಸುವಂತೆ ಲೋಬೊ ಕರೆ ನೀಡಿದರು.
ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಸ್ತೂರಿ ಪಂಜ, ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ) ರಾಜಲಕ್ಷ್ಮಿ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ.ಎಲ್., ಕ್ಷೇತ್ರ ಸಮನ್ವಯ ಅಧಿಕಾರಿ ಪಿತಾಂಬರ್, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಭುಜಂಗ ಪೂಜಾರಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್ ಕುಟಿನ್ಹ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜ, ದೈಹಿತ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ರೈ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಕೆ.ಪೇಜಾವರ, ಉರ್ದು ಶಕ್ಷಕರ ಸಂಘದ ಅಧ್ಯಕ್ಷ ಹನೀಫ್, ಚಿತ್ರಕಲಾ ಸಂಘದ ಅಧ್ಯಕ್ಷ ದಿನೇಶ್, ಶಿಕ್ಷಣ ಸಂಯೋಜಕ ಜಿ.ಉಸ್ಮಾನ್ ಮೊದಲಾದವರು ಉಪಸ್ಥಿತರಿದದ್ದರು. ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಲಯ ವ್ಯಾಪ್ತಿಗೆ ಬರುವ 60 ಮಂದಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಶಿಕ್ಷಕ ಸುಧಾಕರ ಪೇಜಾವರ ಮತ್ತು ಶಿಕ್ಷಣ ಸಂಯೋಜಕಿ ಜಾನೆಟ್ ಅವರು ಕಾರ್ಯಕ್ರಮ ನಿರೂಪಿಸಿದರು.







