ಸಮಾಜದ ಸ್ವಾಸ್ಥ ಕಾಪಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ:ಸಿದ್ದರಾಮಯ್ಯ

ಬೆಂಗಳೂರು, ಸೆ.5: ಶಿಕ್ಷಕರ ದಿನಾಚರಣೆಯ ದಿನದಂದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಗುಣಮಟ್ಟದ, ಮೌಲ್ಯಯುತ ಶಿಕ್ಷಣವನ್ನು ದೊರಕಿಸಿಕೊಟ್ಟು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿ ಅವರ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2016ನೆ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸದಾ ನೆನಪಿಟ್ಟುಕೊಳ್ಳುವಂತಹ ಶಿಕ್ಷಕರಾಗಬೇಕು. ನಾನು ಇಂದು ರಾಜ್ಯದ ಮುಖ್ಯಮಂತ್ರಿಯಾಗಲು ಓರ್ವ ಶಿಕ್ಷಕ ಕಾರಣ. ಪ್ರಾಥಮಿಕ ಶಿಕ್ಷಣವನ್ನು ಕಲಿಯದೆ ಇದ್ದ ತಮಗೆ ನಂಜೇಗೌಡ ಎಂಬ ಜಾನಪದ ನೃತ್ಯ ಶಿಕ್ಷಕರು ಮರಳಿನ ಮೇಲೆಯೆ ಅಕ್ಷರಾಭ್ಯಾಸವನ್ನು ಕಲಿಸಿಕೊಟ್ಟಿದ್ದನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿಕೊಂಡರು.
ಎಸ್.ಎಂ.ರಾಜಪ್ಪಎಂಬ ಮುಖ್ಯೋಪಾಧ್ಯಾಯರು ಮನೆ-ಮನೆಗೂ ಭೇಟಿ ನೀಡಿ ತಮ್ಮನ್ನೂ ಒಳಗೊಂಡಂತೆ ತಮ್ಮ ಗ್ರಾಮದ ಸಾಕಷ್ಟು ಮಕ್ಕಳನ್ನು ಐದನೆ ತರಗತಿಗೆ ನೇರವಾಗಿ ಪ್ರವೇಶ ದೊರಕಿಸಿಕೊಟ್ಟದ್ದನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, ಒಂದು ವೇಳೆ ಅವರು ಆ ಕೆಲಸ ಮಾಡದೆ ಇದ್ದಿದ್ದರೆ ತಾವು ಇಂದು ಈ ಮಟ್ಟಕ್ಕೆ ಏರುತ್ತಿರಲಿಲ್ಲ ಎಂದರು.
ಸಾಮಾನ್ಯವಾಗಿ ತಮ್ಮ ಜೊತೆಯಲ್ಲಿದ್ದವರು ಮೇಲ್ಮಟ್ಟಕ್ಕೇರಿದರೆ ಅಸೂಯೆ ಪಡುವುದು ಮನುಷ್ಯ ಸಹಜ ಗುಣ. ಆದರೆ ಗುರುವಿಗೆ ತನ್ನ ಶಿಷ್ಯ ತನ್ನನ್ನು ಮೀರಿಸಿ ಉನ್ನತ ಮಟ್ಟಕ್ಕೇರುವುದು ಹೆಮ್ಮೆ ತರುವ ಸಂಗತಿ. ಅಂತಹ ಪವಿತ್ರ ವೃತ್ತಿ ಶಿಕ್ಷಕರದ್ದು ಎಂದು ಸಿದ್ದರಾಮಯ್ಯ ಬಣ್ಣಿಸಿದರು.
ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಎಲ್ಲರಿಗೂ ಸಮಾನವಾದ, ಗುಣಮಟ್ಟದ ಶಿಕ್ಷಣ ದೊರಕಿಸಿ ಕೊಡುವುದು ಸರಕಾರದ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲು ನಮ್ಮ ಸರಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವುದು ನಿಜವಾದ ಶಿಕ್ಷಕನ ಕೆಲಸ, ಇದನ್ನು ಪ್ರಾಮಾಣಿಕವಾಗಿ ಎಲ್ಲ ಶಿಕ್ಷಕರೂ ಮಾಡಿದಾಗ ಸದೃಢ ಸಮಾಜ ನಿರ್ಮಾಣ ಸಾದ್ಯವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ಸರಕಾರ ಶಿಕ್ಷಣ ಇಲಾಖೆಯನ್ನು ಆದ್ಯತಾ ವಲಯ ಎಂದು ಗುರುತಿಸಿದೆ. ಪ್ರಸಕ್ತ ಸಾಲಿನಲ್ಲಿ 728 ಶಾಲೆಗಳನ್ನು ಪುನರಾರಂಭ ಮಾಡಲಾಗಿದೆ. ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರಕಾರ ಹೆಚ್ಚಿನ ಗಮನ ಹರಿಸಿದೆ, ಅಲ್ಲದೆ, 2007ರ ವರ್ಗಾವಣಾ ನೀತಿಯಲ್ಲಿ ಸಮಗ್ರ ಬದಲಾವಣೆ ತಂದು ಪ್ರಸಕ್ತ ಸಾಲಿನಿಂದ ಹೊಸ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದರು.
ಶಿಕ್ಷಣದಲ್ಲಿ ಸಮಾನತೆ ಕಾಯ್ದುಕೊಳ್ಳಲು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇದಕ್ಕೆ ಪೂರಕವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರಿಗೆ ತರಬೇತಿ, ಮಕ್ಕಳಿಗೆ ಪ್ರೋತ್ಸಾಹ, ಪೋಷಕರ ಪಾಲ್ಗೊಳ್ಳುವಿಕೆ, ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪನೇತೃತ್ವದಲ್ಲಿ ಪಠ್ಯಕ್ರಮ ಪರಿಷ್ಕರಣೆಗೆ ಸಮಿತಿ ರಚಿಸಲಾಗಿದೆ. ಅಂತೆಯೆ 27 ವಿಷಯವಾರು ಸಮಿತಿಯು ಇದೀಗ ತನ್ನ ವರದಿಯನ್ನು ಮಂಡಿಸಿದೆ. ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಪಠ್ಯಕ್ರಮಕ್ಕೆ ರಾಜ್ಯದ ಪಠ್ಯಕ್ರಮವು ಸರಿಸಮಾನವಾಗಿರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಶಾಲೆಗಳಲ್ಲಿ ದಾಖಲಾತಿ ಹಾಗೂ ಮಕ್ಕಳ ಹಾಜರಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 19,500 ಮುಖ್ಯ ಶಿಕ್ಷಕರ ಹುದ್ದೆ ಸೃಷ್ಠಿಸಲಾಗಿದ್ದು, 7500 ಶಿಕ್ಷಕರಿಗೆ ಮುಂಬಡ್ತಿ ನೀಡಲಾಗಿದೆ. ಸಮಂಜಸ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆಯನ್ನು ತನ್ವೀರ್‌ಸೇಠ್ ನೀಡಿದರು.
ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರು ಕಾರ್ಯನಿರ್ವಹಿಸುವ ಶಾಲೆಗಳಿಗೆ ಗ್ರಂಥಾಲಯ ಸೌಲಭ್ಯ ಕಲ್ಪಿಸುವ ತೀರ್ಮಾನವನ್ನು ಸರಕಾರ ಕೈಗೊಂಡಿದೆ. ಮಕ್ಕಳಲ್ಲಿ ಹೊಸ ಆಲೋಚನೆಗಳು ಮೂಡುವಂತಹ ಕಾರ್ಯಗಳನ್ನು ಶಿಕ್ಷಕರು ಮಾಡುವಂತಾಗಲಿ ಎಂದು ಅವರು ಆಶಿಸಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ 60 ಶಿಕ್ಷಕರನ್ನು ಮುಖ್ಯಮಂತ್ರಿ ಸನ್ಮಾನಿಸಿದರು. ಬೆಂಗಳೂರು ನಗರ ಜಿ.ಪಂ.ಅಧ್ಯಕ್ಷ ಸಿ.ಮುನಿರಾಜು, ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಶಾಸಕರಾದ ರಾಮಚಂದ್ರೇಗೌಡ, ಎನ್.ಎ.ಹ್ಯಾರೀಸ್, ಬಿ.ಶಿವಣ್ಣ, ಪುಟ್ಟಣ್ಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತೆ ಸೌಜನ್ಯಾ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ, ರಾಜ್ಯ ಯೋಜನಾ ನಿರ್ದೇಶಕ ಡಾ.ಪಿ.ಸಿ.ಜಾಫರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







