ಜಾಹಿರಾತಿನಲ್ಲಿ ಧೋನಿ ವಿಷ್ಣು ಅವತಾರ; ಪ್ರಕರಣ ಸುಪ್ರೀಂನಲ್ಲಿ ವಜಾ

ಹೊಸದಿಲ್ಲಿ.ಸೆ,5: ಆಂಗ್ಲ ನಿಯತಕಾಲಿಕೆಯೊಂದರ ಜಾಹೀರಾತಿನಲ್ಲಿ ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ವಿಷ್ಣು ಅವತಾರದಲ್ಲಿ ಕಾಣಿಸಿಕೊಂಡಿರುವನ್ನು ಪ್ರಶ್ನಿಸಿ ಧೋನಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಧೋನಿಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸುವಲ್ಲಿ ಕಾನೂನಿನ ಪರಿಪಾಲನಾ ಪ್ರಕ್ರಿಯೆ ಸರಿಯಾಗಿಲ್ಲ ಎಂದು ಹೇಳಿರುವ ನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಕರ್ನಾಟಕ ನ್ಯಾಯಾಲಯ ನೀಡಿದ್ದ ಸಮನ್ಸನ್ನು ರದ್ದುಗೊಳಿಸಿದೆ.
'ಬ್ಯುಸಿನೆಸ್ ಟುಡೇ ' ಆಂಗ್ಲ ನಿಯತಕಾಲಿಕೆಯಲ್ಲಿ ಎಪ್ರಿಲ್ 2013ರಲ್ಲಿ ಪ್ರಕಟಗೊಂಡಿದ್ದ ಜಾಹೀರಾತ್‌ನಲ್ಲಿ ಧೋನಿ ವಿಷ್ಣು ರೂಪದಲ್ಲಿ ಕಾಣಿಸಿಕೊಂಡಿದ್ದರು. "ದಿ ಗಾಡ್ ಆಪ್ ಬಿಗ್ ಡೀಲ್ಸ್’'ಎಂಬ ತಲೆಬರಹದ ಜಾಹೀರಾತಿನಲ್ಲಿ ಧೋನಿ ಲಾರ್ಡ್ ವಿಷ್ಣುವಿನಂತೆ ನಾನಾ ಕೈಗಳಲ್ಲಿ ನಾನಾ ವಸ್ತುಗಳನ್ನು ಹಿಡಿದಿದ್ದರು. ಕ್ರೀಡಾ ಪರಿಕರಗಳನ್ನು ಧೋನಿ ಕೈಗೆ ನೀಡಲಾಗಿತ್ತು.
ಧೋನಿ ಜಾಹೀರಾತಿನಲ್ಲಿ ವಿಷ್ಣು ರೂಪದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪತ್ರಿಕೆಯ ಪ್ರಕಾಶಕ ಮತ್ತು ಸಂಪಾದಕರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅನಂತಪುರ ನ್ಯಾಯಾಯದಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿ ಧೋನಿ ವಿರುದ್ಧ ಸ್ಥಳೀಯ ವಿಎಚ್‌ಪಿ ಧುರೀಣ ಶ್ಯಾಮ್ ಸುಂದರ್ ದಾವೆ ಹೂಡಿದ್ದರು. ನ್ಯಾಯಾಲ ಧೋನಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿತ್ತು. ಧೋನಿ ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ಧೋನಿ, ಜಾಹೀರಾತಿಗೂ ನನಗೂ ಸಂಬಂಧವಿಲ್ಲ. ವಿನಾಕಾರಣ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಅದರೆ, ಧೋನಿ ವಿರುದ್ಧ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಬಳಿಕ ಧೋನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ಜಯವಾಗಿದೆ.





