ಮಲಯಾಳ ಮನೋರಮಾಕ್ಕೆ ಕಚ್ಚಿದ ಬೀದಿ ನಾಯಿ ಹಾವಳಿಯ ನಕಲಿ ಫೋಟೋ

ತಿರುವನಂತಪುರ,ಸೆ.5: ಕೇರಳದ ಅಗ್ರಗಣ್ಯ ಪತ್ರಿಕೆಯಾದ ಮಲಯಾಳ ಮನೋರಮಾ ಇದೀಗ ಬೀದಿ ನಾಯಿ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದೆ. ಪತ್ರಿಕೆಯ ಆಗಸ್ಟ್ 31ರ ಸಂಚಿಕೆಯಲ್ಲಿ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿರುವ ಚಿತ್ರ ಪ್ರಕಟವಾಗಿತ್ತು. ಆದರೆ ಅದು ನಕಲಿ ಫೋಟೊ ಎನ್ನುವುದು ಈಗ ಬಹಿರಂಗವಾಗಿದೆ.
ಪಾಲಕ್ಕಾಡ್ ಜಿಲ್ಲೆಯ ಮನ್ನಾರ್‌ಕಾಡು ದೇವಸ್ಥಾನ ಸಮೀಪ ಈ ಘಟನೆ ನಡೆದಿದೆ ಎಂದು ವರದಿ ಮಾಡಿತ್ತು. "ಗೃಹಿಣಿಯೊಬ್ಬರ ಮೇಲೆ ಅರಕ್ಕುರುಶಿ ದೇವಸ್ಥಾನದ ಬಳಿ ಬೀದಿ ನಾಯಿಗಳು ದಾಳಿ ಮಾಡಿದವು. ಆಕೆಯ ಬೊಬ್ಬೆ ಕೇಳಿ ಸ್ಥಳೀಯರು ಬಂದು ಆಕೆಯನ್ನು ರಕ್ಷಿಸಿದರು. 8-10 ಬೀದಿನಾಯಿಗಳು ಸದಾ ಇಲ್ಲಿ ರಸ್ತೆ ಮೇರಿರುತ್ತವೆ. ಮಕ್ಕಳು ಮಾತ್ರವಲ್ಲ; ದೊಡ್ಡವರು ಕೂಡಾ ರಸ್ತೆ ಮೇಲೆ ನಡೆಯಲು ಭೀತಿಪಡುವ ಪರಿಸ್ಥಿತಿ ಇದೆ" ಎಂದು ಚಿತ್ರಶೀರ್ಷಿಕೆ ಪ್ರಕಟವಾಗಿತ್ತು.
ಈ ಚಿತ್ರವನ್ನು ನೋಡಿದ ಅರಕ್ಕುರುಶಿ ಭಗವತಿ ದೇವಸ್ಥಾನದ ಅರ್ಚಕ ಶ್ರೀಕುಮಾರ್, ಇಲ್ಲಿ ಬೀದಿನಾಯಿಗಳು ಇವೆಯಾದರೂ, ಕಳೆದ ಒಂದು ವರ್ಷದಲ್ಲಿ ನಾಯಿ ಕಚ್ಚಿದ ಘಟನೆ ನಡೆದಿಲ್ಲ ಎಂದು ಆಕ್ಷೇಪಿಸಿದ್ದರು. ಈ ಚಿತ್ರದಲ್ಲಿ ದೇವಸ್ಥಾನದ ಹುಂಡಿ ಕಾಣುತ್ತಿದ್ದು, ಈಗ ಹುಂಡಿ ಕೇಸರಿ ಬಣ್ಣ ಹೊಂದಿಲ್ಲ. ಅಂತೆಯೇ ಚಿತ್ರದಲ್ಲಿ ಕಾಣುವ ಫ್ಲೆಕ್ಸ್ ಕಳೆದ ವರ್ಷದ ಗಣೇಶೋತ್ಸವದ್ದು ಎಂದು ಪತ್ತೆ ಮಾಡಿದ್ದಾರೆ.
ಕಳೆದ ವರ್ಷದ ಫೋಟೊವನ್ನು ತಿದ್ದಿ, ಪ್ರಕಟಿಸಲಾಗಿದೆ ಎಂದು ಅವರು ಆಪಾದಿಸಿದ್ದಾರೆ. ಈ ಚಿತ್ರದಲ್ಲಿ ಕಾಣುತ್ತಿರುವ ಮಹಿಳೆ ದೇವಸ್ಥಾನದ ಕೆಲಸದಾಕೆ. ಆಕೆಯನ್ನು ಚಿತ್ರದಲ್ಲಿ ನೋಡಿದ ತಕ್ಷಣ ಈ ಬಗ್ಗೆ ಆಕೆಯನ್ನು ವಿಚಾರಿಸಿದ್ದೆ. ಕಳೆದ ವರ್ಷ ದೇವಸ್ಥಾನಕ್ಕೆ ಬರುವಾಗ ಬಿದ್ದಾಗ ತೆಗೆದ ಚಿತ್ರ ಎಂದು ಸ್ಪಷ್ಟಪಡಿಸಿದ್ದಾಗಿ ವಿವರಿಸಿದ್ದಾರೆ.
ದೇವಾಲಯದಲ್ಲಿ ಅಂದು ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಒಬ್ಬರು ಈ ಚಿತ್ರವನ್ನು ಕ್ಲಿಕ್ಕಿಸಿ ಸ್ಟುಡಿಯೊಗೆ ನೀಡಿದ್ದಾರೆ. ಅದನ್ನು ಈಗ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ ಎನ್ನುವುದು ಅವರ ವಾದ.
ಇದು ವಿವಾದಕ್ಕೆ ತಿರುಗುತ್ತಿದ್ದಂತೆ ಪತ್ರಿಕೆ ಸ್ಥಳೀಯ ಮುದ್ರಣದಲ್ಲಿ ಸ್ಪಷ್ಟನೆ ನೀಡಿದೆ.







