ಉಚ್ಛಾಟಿತ ಆಪ್ ನಾಯಕ ಸಂದೀಪ್ ಕುಮಾರ್ ಅವರಿಗೆ ಮತ್ತೆ ಮೂರು ದಿನಗಳ ಕಸ್ಟಡಿ

ಹೊಸದಿಲ್ಲಿ,ಸೆ. 5 : ಸೆಕ್ಸ್ ಸಿಡಿ ವಿವಾದ ಆರೋಪ ಹೊತ್ತಿರುವ ಆಪ್ ಉಚ್ಛಾಟಿತ ನಾಯಕ ಸಂದೀಪ್ ಕುಮಾರ್ ಅವರನ್ನು ದೆಹಲಿ ನ್ಯಾಯಾಲಯ ದಿನಗಳ ಕಾಲ ಸೋಮವಾರ ಪೊಲೀಸರ ವಶಕ್ಕೆ ನೀಡಿದೆ.
ಸೆಕ್ಸ್ ಸಿಡಿ ವಿವಾದ ಕುರಿತಂತೆ ನಿನ್ನೆಯಷ್ಟೇ ವಿಚಾರಣೆ ನಡೆಸಿದ್ದ ದಿಲ್ಲಿಯ ಜಿಲ್ಲಾ ನ್ಯಾಯಾಲಯವು ಸಂದೀಪ್ ಅವರಿಗೆ ಒಂದು ದಿನದ ಪೊಲೀಸ್ ಕಸ್ಟಡಿ ವಿಧಿಸಿತ್ತು. ಪೊಲೀಸರು ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಹೆಚ್ಚಿನ ವಿಚಾರಣೆಗಾಗಿ ದಿಲ್ಲಿ ನ್ಯಾಯಾಲಯ ಸಂದೀಪ್ ಕುಮಾರ್ ಅವರಿಗೆ ಮತ್ತೆ ಮೂರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.
ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಶನಿವಾರ ಮಾಜಿ ಸಚಿವ ಸಂದೀಪ್ ಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು.
ಸಂದೀಪ್ ಕುಮಾರ್ ಅವರು ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಶನಿವಾರ ಸಂಜೆ ಉಪ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶರಣಾಗಿದ್ದರು.. ಬಳಿಕ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು.
"ಹನ್ನೊಂದು ತಿಂಗಳ ಹಿಂದೆ ರೇಷನ್ ಕಾರ್ಡ್ ಪಡೆಯಲು ಸಹಾಯ ಕೋರಿ ನಾನು ಸಚಿವರ ಬಳಿ ಹೋಗಿದ್ದೆ. ಆ ವೇಳೆ ಅವರು ನನಗೆ ಮತ್ತು ಬರುವ ಪಾನೀಯ ನೀಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ವಿವಾಹಿತ ಮಹಿಳೆಯೊಬ್ಬರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಕಳೆದ ಬುಧವಾರ ಸಂದೀಪ್ ಕುಮಾರ್ ಅವರು ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಿರುವ ಸಿಡಿಯೊಂದು ಬಹಿರಂಗವಾಗುತ್ತಿದ್ದಂತೆ ಸಿಎಂ ಕೇಜ್ರಿವಾಲ್ ಅವರು ಸಂದೀಪ್ ಅವರನ್ನು ತಮ್ಮ ಸಂಪುಟದಿಂದ ವಜಾ ಮಾಡಿದ್ದರು.ಆಪ್ ನ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತುಗೊಳಿಸಲಾಗಿತ್ತು.





