ಅಸರಾಂ ಬಾಪು ಮಧ್ಯಾಂತರ ಜಾಮೀನು ಅರ್ಜಿಯನ್ನು ಮತ್ತೆ ವಜಾಗೊಳಿಸಿದ ಸುಪ್ರೀಂ

ಹೊಸದಿಲ್ಲಿ, ಸೆ.5: ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪುಗೆ ಮಧ್ಯಾಂತರ ಜಾಮೀನು ನೀಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.
ಬಾಪು ವಿರುದ್ದ ಸೂರತ್ ಮೂಲದ ಸಹೋದರಿಯರು 2013ರಲ್ಲಿ ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣ ಮತ್ತು ಜೋಧಪುರದ ಅಪ್ರಾಪ್ತ ಬಾಲಕಿಯೊಬ್ಬಳು ಸಲ್ಲಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಅರ್ಜಿಯ ವಿಚಾರಣೆಯನ್ನು ಒಟ್ಟಿಗೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿ ಎ.ಕೆ.ಸಿಕ್ರಿ ಮತ್ತು ಎನ್.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠವು ಇಂದು ಆದೇಶ ನೀಡಿದೆ.
ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಜೈಲು ಸೇರಿರುವ ಅಸಾರಾಂ ಬಾಪು ಅವರು ಅನಾರೋಗ್ಯದ ಕಾರಣಕ್ಕಾಗಿ , ಪಂಚಕರ್ಮ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳಲು ಕೇರಳಕ್ಕೆ ತೆರಳಲು ಮಧ್ಯಂತರ ಜಾಮೀನು ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.
ಆ.11 ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ರಾಜಸ್ಥಾನ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ಸುಪ್ರೀಂ ನಿರಾಕರಿಸಿ ಅಸಾರಾಂ ಅವರ ಆರೋಗ್ಯ ಸಮಸ್ಯೆಯನ್ನು ಪರೀಕ್ಷಿಸಲು ತ್ರಿಸದಸ್ಯ ವೈದ್ಯಕೀಯ ಸಮಿತಿಯೊಂದನ್ನು ರಚಿಸುವಂತೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಆದೇಶ ನೀಡಿದೆ. ಈ ಬಗ್ಗೆ ಹತ್ತು ದಿನಗಳ ಒಳಗಾಗಿ ವರದಿ ನೀಡುವಂತೆ ಆದೇಶ ನೀಡಿದೆ.





