ಬರಾಕ್ ಒಬಾಮಗೆ ಅವಹೇಳನಕಾರಿ ಪದ ಬಳಸಿದ ಫಿಲಿಫೀನ್ಸ್ ಅಧ್ಯಕ್ಷ

ದವಾವೊ, ಫಿಲಿಫೀನ್ಸ್,ಸೆ.5: ಫಿಲಿಫೀನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟ್ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಅವಹೇಳನಕಾರಿಯಾಗಿ "ಸನ್ ಆಫ್ ಎ ವೋರ್" (ಸೂ...ಮಗ) ಎಂದು ಸಂಬೋಧಿಸಿರುವುದು ಬೆಳಕಿಗೆ ಬಂದಿದೆ.
ಲಾವೋಸ್‌ನಲ್ಲಿ ಇಬ್ಬರು ಮುಖಂಡರ ಮಾತುಕತೆ ನಡೆಸಿದ ವೇಳೆ, ಮಾನವ ಹಕ್ಕುಗಳ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷರ ತೀಕ್ಷ್ಣ ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ದೇಶದಲ್ಲಿ 2400ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡ ಮಾದಕ ವಸ್ತು ಅಪರಾಧಗಳ ವಿರುದ್ಧದ ಸಮರದ ಬಗ್ಗೆ ಒಬಾಮಾ ಪ್ರಶ್ನಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ತೀಕ್ಷ್ಣ ನಾಲಿಗೆಯ ಡ್ಯುಟೆರ್ಟ್ ಸುದ್ದಿಗೋಷ್ಠಿಯಲ್ಲಿ ತಾಳ್ಮೆ ಕಳೆದುಕೊಂಡು ಹೀಗೆ ಹೇಳಿದರು.
"ನೀವು ಗೌರವ ಉಳಿಸಿಕೊಳ್ಳಿ. ಕೇವಲ ಪ್ರಶ್ನೆಗಳನ್ನು ಕೇಳಿ ಹೇಳಿಕೆಗಳನ್ನು ನಿಡಬೇಡಿ. ಸನ್ ಆಫ್ ಎ ವೋರ್..ಆ ವೇದಿಕೆಯಲ್ಲಿ ನಿಮ್ಮನ್ನು ಅದಕ್ಕೆ ಶಪಿಸುತ್ತೇನೆ" ಎಂದು ಲಾವೋಸ್‌ಗೆ ಹೊರಡುವ ಮುನ್ನ ಸುದ್ದಿಗೋಷ್ಠಿಯಲ್ಲಿ ಅಬ್ಬರಿಸಿದರು. ಫಿಲಿಫೀನ್ಸ್ ಅಧ್ಯಕ್ಷರು ಮತ್ತು ಒಬಾಮ ನಡುವಿನ ಭೇಟಿ ಜಿ-20 ಶೃಂಗದ ವೇಳೆ ಮಂಗಳವಾರ ಮಧ್ಯಾಹ್ನ ನಡೆಯಲಿದೆ.
"ನೀವು ಹಾಗೆ ಮಾಡಿದರೆ, ನಾವು ಹಂದಿಗಳಂತೆ ಕೆಸರು ಎರಚಿಕೊಳ್ಳಬೇಕಾಗುತ್ತದೆ" ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
ಈ ಹೇಳಿಕೆಯಿಂದಾಗಿ ಉಭಯ ನಾಯಕರ ನಡುವೆ ಮಾತುಕತೆ ನಡೆಯುವ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.







