ಕೋಮುಗಲಭೆ ಸೃಷ್ಟಿಸಿ ರಾಜಕೀಯ ಲಾಭಗಳಿಸಿಕೊಳ್ಳುವ ಪ್ರಯತ್ನ ವಿಫಲಗೊಳಿಸಲು ತಂಝೀಮ್ ಆಗ್ರಹ
ಅಮಾನತ್ತುಗೊಂಡ ಎಸೈ ಪತ್ರದ ಹಿನ್ನೆಲೆ

ಭಟ್ಕಳ ನಗರಠಾಣೆಯ ಅಮಾನತ್ತುಗೊಂಡಿರುವ ಪೊಲೀಸ್ ಅಧಿಕಾರಿ ತಮ್ಮ ರಾಜಿನಾಮೆ ಪತ್ರ ನೀಡಿದ ನಂತರ ರಾಜ್ಯದ ಗೃಹಸಚಿವರಿಗೆ ಬರೆದ ಪತ್ರದಲ್ಲಿ ಭಟ್ಕಳದಲ್ಲಿ ಕೋಮುಗಲಭೆಗಳನ್ನು ಹುಟ್ಟು ಹಾಕುವ ಪ್ರಯತ್ನಗಳನ್ನು ಬಹಿರಂಗಗೊಳಿಸಿದ್ದಾರೆ.
ಈ ನಿಟ್ಟಿನಲ್ಲಿ ಭಟ್ಕಳದ ಮಜ್ಲಿಸೆ ಇಸ್ಲಾಹ್ ವ-ತಂಝೀಮ್ ಸಂಸ್ಥೆಯ ಪದಾಧಿಕಾರಿಗಳ ನಿಯೋಗವೊಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಯನ್ನು ಅರ್ಪಿಸಿದ್ದು ಕೋಮುಗಲಭೆಗಳನ್ನು ಸೃಷ್ಟಿಸಿ ರಾಜಕೀಯ ಲಾಭಗಳಿಸಿಕೊಳ್ಳುವ ಕೋಮುವಾದಿಗಳ ಪ್ರಯತ್ನಗಳನ್ನು ವಿಫಲಗೊಳಿಸುವಂತೆ ತಂಝೀಮ್ ಆಗ್ರಹಪಡಿಸಿದೆ.
ಇತ್ತಿಚೆಗೆ ಭಟ್ಕಳದಲ್ಲಿ ಜರಗಿದ ಮೂರು ಘಟನಾವಳಿಗಳನ್ನು ಪ್ರಸ್ತಾಪಿಸಿದ್ದು ಇದರಲ್ಲಿ ರಾಜಕೀಯ ಸ್ವಾರ್ಥಕ್ಕಾಗಿ ಕೋಮುಗಲಭೆ ಹುಟ್ಟುಹಾಕುವಲ್ಲಿ ಫ್ಯಾಸಿಸ್ಟ್ ಶಕ್ತಿಗಳೊಂದಿಗೆ ಪೊಲೀಸ್ ಇಲಾಖೆಯ ಕೆಲ ಉನ್ನತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಗುರುತರ ಆರೋಪವನ್ನು ಮಾಡಿದ್ದು ಇದೊಂದು ನಾಚಿಕಗೇಡು ಮತ್ತು ಅತ್ಯಂತ ಕಳವಳಕಾರಿಯಾಗಿದೆ ಎಂದು ಮನವಿ ತಿಳಿಸಿದೆ.
ಸೇವೆಯಿಂದ ಅಮಾನತ್ತುಗೊಂಡಿರುವ ಅಧಿಕಾರಿ 4-06-2016ರಂದು ಹನುಮಾನ್ ನಗರ ಹಾಗೂ ಜುಲೈ 17, 2016 ರಂದು ಕೋಗ್ತಿನಗರದ ನಾಗಬನದಲ್ಲಿ ಜಾನುವಾರು ಮಾಂಸವನ್ನು ಹಾಕಿದ ಪ್ರಕರಣದಲ್ಲಿ ಯಾರ ಯಾರ ಕೈವಾಡವಿದೆ, ತನಿಖೆಯಲ್ಲಿ ಕಂಡುಬಂದ ಸತ್ಯ ಹಾಗೂ ಈ ಸತ್ಯವನ್ನು ಯಾವ ರೀತಿ ಮಣ್ಣುಮಾಡಲಾಯಿತು ಎನ್ನುವುದನ್ನು ಪ್ರಸ್ತಾಪಿಸಿದ್ದಾರೆ. ಭಟ್ಕಳ ನಗರದಲ್ಲಿ ಶಾಂತಿ ಸೌಹಾರ್ಧತೆಯನ್ನು ಕದಡುವ ಮತ್ತು ಕೋಮುಗಲಭೆಗಳನ್ನು ಹುಟ್ಟುಹಾಕುವ ಕೋಮುವಾದಿಗಳೊಂದಿಗೆ ಸಾತ್ ನೀಡುತ್ತಿರುವ ಕೆಲ ಉನ್ನತ ಪೊಲೀಸ್ ಅಧಿಕಾರಿಗಳ ಕುರಿತಂತೆ ಸ್ಪಷ್ಟವಾಗಿ ಆರೋಪಿಸಿದ್ದಾರೆ. ಮತ್ತು ರಾಜಕೀಯ ಪಕ್ಷಗಳು ಕೋಮುಗಲಭೆಗಳನ್ನು ಸೃಷ್ಟಿಸುವುದರ ಮೂಲಕ ತಮ್ಮ ರಾಜಕೀಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ವಿಧಾನಸಭಾ ಚುನಾವಣೆಗಳು ಎದುರಾಗುತ್ತಿದ್ದು ಈ ಹಿನ್ನಲೆಯಲ್ಲಿ ಇಂತಹ ದುರುದ್ದೇಶಪೂರಿತ ಘಟನಾವಳಿಗಳನ್ನು ಜೀವತುಂಬಲಾಗುತ್ತಿದೆ ಎಂಬುದು ನಮ್ಮ ಬಲವಾದ ನಂಬಿಕೆಯಾಗಿದೆ. ಆಮಾನತ್ತುಗೊಂಡಿರುವ ಪೊಲೀಸ್ ಅಧಿಕಾರಿ ಮೇಲಿನ ಎರಡೂ ಮಾಂಸ ಎಸೆತ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ನೀಡಿದ್ದು ಗಂಭೀರವಾಗಿ ಪರಿಗಣಿಸಿ ಇದು ಭಟ್ಕಳದ ಶಾಂತಿ ಸೌಹಾರ್ಧತೆಗೆ ಕಂಟಕಪ್ರಾಯವೂ ಆಗಬಹುದಾಗಿದೆ. ನಮ್ಮ ಬೇಡಿಕೆಯೆಂದರೆ ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರುವಲ್ಲಿ ಯಾವುದಾದರೂ ಸ್ವತಂತ್ರ ತನಿಖಾ ಸಂಸ್ಥೆ, ನಿವೃತ್ತ ನ್ಯಾಯಾಮೂರ್ತಿ, ಸಿಐಡಿ ಅಥವಾ ಸಿಬಿಐ ಅಧಿಕಾರಿಗಳಿಂದ ತನಿಖೆ ನಡೆಸಲ್ಪಡಬೇಕು. ಸತ್ಯ ಜಗಜ್ಜಾಹಿರಾಗಬೇಕು ಮತ್ತು ಇಂತಹ ಪ್ರಕರಣಗಳು ಭವಿಷ್ಯದಲ್ಲಿ ನಡೆಯಕೂಡದು. ಒಂದು ವೇಳೆ ಇದನ್ನು ಕಡತದ ಶೋಭೆಯನ್ನಾಗಿ ಮಾಡಿದ್ದಲ್ಲಿ ಭಟ್ಕದಲ್ಲಿ ಶಾಂತಿ ಕದಡುವ ಆತಂಕವಿದೆ.
ಎರಡೂ ಘಟನೆಯ ನಂತರ ಪರಿಸ್ಥಿತಿಯ ವಿಕೋಪಕ್ಕೆ ಹೋಗುವುದನ್ನು ತಡೆಗಟ್ಟಲು ಉತ್ತರಕನ್ನಡ ಜಿಲ್ಲಾ ಹೆಚ್ಚುವರಿ ಜಿಲ್ಲಾಪೊಲೀಸ್ ಅಧೀಕ್ಷಕರ ಉಪಸ್ಥಿತಿಯಲ್ಲಿ ಭಟ್ಕಳದ ಎ.ಎಸ್.ಪಿ. ಡಾಕ್ಟರ್ ಅನೂಪ್ ಶೇಟ್ಟಿ, ಸರ್ಕಲ್ ಇನ್ಸ್‌ಪೆಕರ್ ನ್ನು ಭೇಟಿಯಾಗಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತ ಭಟ್ಕಳದ ಶಾಂತಿ ಮತ್ತು ಸೌಹಾರ್ಧತೆಯನ್ನು ಉಳಿಸಿಕೊಂಡು ಹೋಗಲು ಮತ್ತು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸುವಂತಾಗಲು ಪ್ರಕರಣದ ಪಾರದರ್ಶಕತೆಯಿಂದ ತನಿಖೆ ನಡೆಸಿ ತಪ್ಪಿತಸ್ತರು ಹಿಂದು-ಮುಸ್ಲಿಮ್ ಯಾರೇ ಆಗಿರಲಿ ಅವರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಜರಗಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹ ಇದಕ್ಕೆ ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಜರಗಿಸುವುದೆ ಇರುವುದರಿಂದ ಸಾರ್ವಜನಿಕರಲ್ಲಿ ಕಳವಳನ್ನುಂಟು ಮಾಡಿದೆ.
ಭಟ್ಕಳದ ಜನತೆ ಯಾವತ್ತೂ ಶಾಂತಿ ಸೌಹಾರ್ಧತೆಯನ್ನು ಬಯಸುವವರಾಗಿದ್ದು ಇಲ್ಲಿನ ಕೆಲ ಕೋಮುವಾದಿ ಸಂಘಟನೆಗಳು ಹಾಗೂ ಕೋಮುವಾದಿ ರಾಜಕೀಯ ಪಕ್ಷಗಳು ಜನರಲ್ಲಿ ಪರಸ್ಪರ ಅಪನಂಬಿಕೆ ಮೂಡಿಸುವಂತಹ ಹೀನಾ ಕಾರ್ಯಕ್ಕೆ ಕೈಹಾಕುತ್ತಿದ್ದಾರೆ. ಇಂತಹ ವ್ಯಕ್ತಿಗಳೊಂದಿಗೆ ಕೆಲ ಪೊಲೀಸ್ ಇಲಾಖೆಯ ಅಧಿಕರಿಗಳು ಕೈಜೋಡಿಸಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಿ ಪ್ರಕರಣದ ಗಂಭೀರತೆಯನ್ನು ಅರಿತು ಪಾರದರ್ಶಕವಾಗಿ ಮತ್ತು ನ್ಯಾಯಪರವಾದ ತನಿಖೆಯನ್ನು ಕೈಗೊಳ್ಳಬೇಕೆಂದು ತಂಝೀವ್ ಸಂಸ್ಥೆಯ ನಿಯೋಗ ಆಗ್ರಹಿಸಿದೆ.
ನಿಯೋಗದಲ್ಲಿ ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ, ಮುಹಮ್ಮದ್ ಸಾದಿಕ್ ಮಟ್ಟಾ, ನ್ಯಾಯವಾದಿ ಇಮ್ರಾನ್ ಲಂಕಾ, ಮುಹಮ್ಮದ್ ಮೀರಾ ಸಿದ್ದೀಖಾ ಮತ್ತಿತರರು ಇದ್ದರು.







