ಹಣವಿಲ್ಲದೆ ಮಗುವಿನ ಮೃತದೇಹವನ್ನು ಮಡಿಲಲ್ಲಿಟ್ಟು ರಾತ್ರಿ ಕಳೆದ ತಾಯಿ..!

ಮೀರತ್, ಸೆ.5: ಮೃತಪಟ್ಟ ಎರಡೂವರೆ ವರ್ಷದ ಮಗುವಿನ ಮೃತದೇಹವನ್ನು ಸಾಗಿಸಲು ಕೈಯಲ್ಲಿ ಹಣವಿಲ್ಲದೆ ತಾಯಿಯೊಬ್ಬಳು ಮಡಿಲಲ್ಲಿರಿಸಿ ರಾತ್ರಿ ಕಳೆದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಭಾಗ್‌ಪಟ್ ಜಿಲ್ಲೆಯ ಗೌರೀಪುರದ ನಿವಾಸಿಯಾಗಿರುವ ಇಮ್ರಾನಾ ಮೃತಪಟ್ಟ ಮಗುವಿನ ಮೃತದೇಹವನ್ನು ಊರಿಗೆ ಸಾಗಿಸಲು ಕೈಯಲ್ಲಿ ಹಣವಿಲ್ಲದೆ ತಿಂದರೆ ಅನುಭವಿಸಿದ ತಾಯಿ.
ಇಮ್ರಾನಾ ಅವರು ಎರಡೂವರೆ ವರ್ಷದ ಹೆಣ್ಣು ಮಗು ಗುಲ್ನಾಡ್ ಅಸೌಖ್ಯದ ಹಿನ್ನೆಲೆಯಲ್ಲಿ ಪಿಎಲ್ ಶರ್ಮಾ ಆಸ್ಪತ್ರೆಗೆ ದಾಖಲಿಸಿದ್ದರು.. ಆದರೆ ಗುರುವಾರ ರಾತ್ರಿ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಮೀರುತ್ ನಲ್ಲಿರುವ ಲಾಲಾ ಲಜಪತ್ ರಾಯ್ ಮೆಡಿಕಲ್ ಕಾಲೇಜಿಗೆ ದಾಖಲಿಸುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಮಗುವನ್ನು ಎಲ್ಎಲ್ಆರ್ ಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಮೃತಪಟ್ಟಿದೆ.
ಬಳಿಕ ಮಗುವಿನ ಮೃತದೇಹವನ್ನು ಗೌರೀಪುರದಲ್ಲಿರುವ ಮನೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಸಹಾಯಕ್ಕಾಗಿ ಇಮ್ರಾನಾ ಎರಡು ಗಂಟೆಗಳ ಕಾಲ ಅಲೆದಿದ್ದಾರೆ. ಮಗುವಿನ ಮೃತದೇಹವನ್ನು ಸಾಗಿಸಲು ನೆರವಾಗುವಂತೆ ಅವರು ಆ್ಯಂಬುಲೆನ್ಸ್ ಚಾಲಕನಲ್ಲಿ ವಿನಂತಿಸಿದ್ದಾರೆ.ಆದರೆ ಚಾಲಕ 2500 ರೂ. ಬಾಡಿಗೆ ಕೇಳಿದ್ದಾನೆ. . ಅಷ್ಟೊಂದು ದುಡ್ಡು ಇಮ್ರಾನ್ ಕೈಯಲ್ಲಿರಲಿಲ್ಲ. ಈ ಕಾರಣದಿಂದಾಗಿ ಚಾಲಕ ಮಗುವಿನ ಮೃತದೇಹ ಸಾಗಿಸಲು ನಿರಾಕರಿಸಿದ್ದಾನೆ. ಇದರಿಂದ ಬೇರೆ ದಾರಿ ಕಾಣದ ತಾಯಿ ಇಮ್ರಾನಾ ಮಗುವಿನ ಶವವನ್ನು ಮಡಿಲಲ್ಲಿರಿಸಿ ಜಿಲ್ಲಾಸ್ಪತ್ರೆಯ ತುರ್ತುಘಟಕದ ಹೊರಗೆ ಇಡೀ ರಾತ್ರಿ ಕಳೆದಿದ್ದಾರೆ.
ಮರುದಿನ ಬೆಳಗ್ಗೆ ಸ್ಥಳೀಯರು ಇಮ್ರಾನಾ ಅವರಿಗೆ ಸಹಾಯ ಮಾಡಿ ಖಾಸಗಿ ಆ್ಯಂಬುಲೆನ್ಸ್ ನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಲು ಸಹಾಯಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ತನ್ನ ಗಮನಕ್ಕೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಜಗತ್‌ರಾಜ್ ತ್ರಿಪಾಠಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶ ನೀಡಿರುವುದಾಗಿ ಹೇಳಿರುವ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.





