‘‘ಆಂಬುಲೆನ್ಸ್ ಹಾರಿಕೊಂಡು ಬರುವುದಿಲ್ಲ!’’
ನ್ಯಾಯಾಧೀಶರಿಗೆ ಸಿಕ್ಕಿದ ಉತ್ತರ

ಚಂಡೀಗಢ, ಸೆ.6: ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ನಾಲ್ಕು ಮಂದಿಯ ಸಹಾಯಕ್ಕೆ ಧಾವಿಸಿದ ನ್ಯಾಯಾಧೀಶರೊಬ್ಬರು ಆಂಬುಲೆನ್ಸ್ ಒಂದನ್ನು ಸ್ಥಳಕ್ಕೆ ತರಿಸಲು ತುರ್ತು ಸೇವಾ ಸಂಖ್ಯೆ 102 ಕ್ಕೆ ಕರೆ ಮಾಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ‘‘ಆಂಬುಲೆನ್ಸ್ ಹಾರಿಕೊಂಡು ಬರುವುದಿಲ್ಲ’’ ಎಂದು ಅತ್ತ ಕಡೆಯಿಂದ ಉತ್ತರಿಸಿದ ವ್ಯಕ್ತಿ ಹೇಳಿದಾಗ ದಂಗಾಗುವ ಸರದಿ ನ್ಯಾಯಾಧೀಶರದ್ದಾಗಿತ್ತು.
ಪಂಚಕುಲಾ ಜಿಲ್ಲೆಯ ಸಿಬಿಐ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿರುವ ಸಂದೀಪ್ ಸಿಂಗ್ ಹರ್ಯಾಣದ ಜಿಂದ್ ನಗರದಲ್ಲಿ ನಾಲ್ಕು ಮಂದಿ ಅಪಘಾತದ ಗಾಯಾಳುಗಳು ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಿ ಕನಿಕರ ಪಟ್ಟು ಆಂಬುಲೆನ್ಸ್ ಗೆ ಕರೆ ಮಾಡಿದ್ದರು. ಹಲವಾರು ಬಾರಿ ಪ್ರಯತ್ನ ನಡೆಸಿದ ಬಳಿಕ ಕಾಲ್ ಕನೆಕ್ಟ್ ಆಗಿದ್ದರೂ ಬೇಜವಾಬ್ದಾರಿಯ ಉತ್ತರ ದೊರಕಿತ್ತು. ಸ್ವಲ್ಪ ಸಮಯ ಆಂಬುಲೆನ್ಸ್ ಗಾಗಿ ಕಾದ ನ್ಯಾಯಾಧೀಶರು ಮತ್ತೆ ಕರೆ ಮಾಡಿದಾಗ ಮೇಲಿನಂತೆ ಉತ್ತರ ಅವರಿಗೆ ದೊರಕಿತ್ತು. ಕೊನೆಗೆ ನ್ಯಾಯಾಧೀಶರು ತಮ್ಮ ವಾಹನದಲ್ಲಿಯೇ ಗಾಯಾಳುಗಳನ್ನು ಕಷ್ಟಪಟ್ಟು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರೊಳಗಾಗಿ ಅವರಲ್ಲೊಬ್ಬರು ಮೃತ ಪಟ್ಟಿದ್ದರು.
ಬೇಜವಾಬ್ದಾರಿ ತೋರಿದ ಆಂಬುಲೆನ್ಸ್ ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ.





