ಇನ್ನು ನಿಮ್ಮ ಡ್ರೈವಿಂಗ್ ಲೈಸೆನ್ಸ್, ಆರ್ ಸಿ ನಿಮ್ಮ ಕೈಯಲ್ಲಿರುವ ಅಗತ್ಯವಿಲ್ಲ !
ಕೇಂದ್ರದಿಂದ ಹೊಸ ತಂತ್ರಜ್ಞಾನ

ಹೊಸದಿಲ್ಲಿ, ಸೆ. 6 : ಇನ್ನು ನೀವು ನಿಮ್ಮ ಜೊತೆ ಡ್ರೈವಿಂಗ್ ಲೈಸೆನ್ಸ್ ಹಾಗು ನೋಂದಣಿ ಪ್ರಮಾಣಪತ್ರ ( ಆರ್. ಸಿ) ಇಟ್ಟುಕೊಳ್ಳದಿದ್ದರೂ ಪೊಲೀಸರು ನಿಮಗೆ ದಂಡ ಹಾಕುವುದಿಲ್ಲ, ಕಿರಿಕಿರಿ ಮಾಡುವುದಿಲ್ಲ !
ಅದು ಹೇಗೆಂದರೆ, ಈ ಅಮೂಲ್ಯ ದಾಖಲೆಗಳನ್ನು ಸುರಕ್ಷಿತ ರಾಷ್ಟ್ರೀಯ ಡಿಜಿಟಲ್ ಲಾಕರ್ ' ಡಿಜಿಲಾಕರ್ ' ನಲ್ಲಿ ದಾಖಲಿಸಿಟ್ಟು ಟ್ರಾಫಿಕ್ ಪೊಲೀಸರು ಮತ್ತು ಇತರ ಅಧಿಕಾರಿಗಳು ಬೇಕೆಂದಾಗ ಅಲ್ಲಿಂದ ಅದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದು.
ಸಾರಿಗೆ ಹಾಗು ಐಟಿ ಇಲಾಖೆ ಸಚಿವಾಲಯಗಳು ಜಂಟಿಯಾಗಿ ಈ ಹೊಸ ಯೋಜನೆಯನ್ನು ಬುಧವಾರ ಅನಾವರಣಗೊಳಿಸಲಿವೆ. ಈ ' ಡಿಜಿಲಾಕರ್' ಮೂಲಕ ನಿಮ್ಮ ಎಲ್ಲ ಅಮೂಲ್ಯ ದಾಖಲೆಗಳನ್ನು ಒಂದೇ ಕಡೆ ನೀವು ದಾಖಲಿಸಿ ಇಟ್ಟುಕೊಳ್ಳಬಹುದು. ಇದಕ್ಕೆ ನಿಮ್ಮ ಬಳಿ ಆಧಾರ್ ಕಾರ್ಡ್ ಅನ್ನು ಮೊಬೈಲ್ ಗೆ ಲಿಂಕ್ ಮಾಡಿಕೊಂಡರೆ ನೀವು ' ಡಿಜಿಲಾಕರ್ ' ನಲ್ಲಿ ಖಾತೆ ತೆರೆಯಬಹುದು.
ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಪ್ರಯಾಣಿಕರ ಡ್ರೈವಿಂಗ್ ಲೈಸೆನ್ಸ್ ಹಾಗು ಆರ್ ಸಿ ಗಳನ್ನು ಅವರ ಮೊಬೈಲ್ ನಲ್ಲೇ ರಾಷ್ಟ್ರೀಯ ವಾಹನ ಹಾಗು ಚಾಲಕರ ನೋಂದಾವಣಿಯಲ್ಲಿ ಖಚಿತಪಡಿಸಿಕೊಳ್ಳಬಹುದು.





