ಸ್ಯಾಮ್ಸಂಗ್ ನೋಟ್ 5 ಮೇಲೆ 93% ರಿಯಾಯಿತಿ !
ಏನಿದರ ಹಕೀಕತ್ತು ?

ಚೆನ್ನೈ, ಸೆ.6: ಇಂದಿನ ಇಂಟರ್ನೆಟ್ ಯುಗದಲ್ಲಿ ಎಲ್ಲವೂ ಆನ್ ಲೈನ್ ನಲ್ಲಿ ಕಡಿಮೆ ದರದಲ್ಲಿ ಲಭ್ಯವೆಂಬುದು ಸಾಮಾನ್ಯ ಗ್ರಹಿಕೆ. ಇ-ಕಾಮರ್ಸ್ ಕಂಪೆನಿಗಳಂತೂ ಡಿಸ್ಕೌಂಟ್ ಸೇಲ್ ಎಂದು ಹೇಳುತ್ತಾ ಗ್ರಾಹಕರನ್ನು ಸೆಳೆಯುತ್ತವೆ. ಆದರೆ ಒಂದು ಉತ್ಪನ್ನಕ್ಕೆ ಶೇ.93 ರಷ್ಟು ಡಿಸ್ಕೌಂಟ್ ಎಂದು ಹೇಳಿದರೆ ಯಾರ ಮನದಲ್ಲಾದರೂ ಸಂಶಯ ಕಾಡದೇ ಇರದಿರಬಹುದು.
ಕಳೆದ ವಾರ ಒಂದು ಸುದ್ದಿ ವೈರಲ್ ಆಗಿತ್ತು. ‘ದಿ ಬ್ರೇಕಿಂಗ್ ನ್ಯೂಸ್’ ಎನ್ನುವ ಮೆಸೇಜ್ ನಲ್ಲಿ ಹೀಗೆಂದು ಬರೆದಿತ್ತು. ‘‘ಗ್ಯಾಲಕ್ಸಿ ನೋಟ್ 5 ಫೋನನ್ನು ಅಮೆಝಾನ್ ಕೇವಲ 899 ರೂ.ಗೆ ಮಾರಾಟ ಮಾಡುತ್ತಿದೆ. ಸೇಲ್ ಮುಗಿಯುವ ಮುನ್ನ ಖರೀದಿಸಿ, ಕ್ಯಾಶ್ ಆನ್ ಡೆಲಿವರಿ ಕೂಡ ಲಭ್ಯ. ವಿಸಿಟ್ ಅಮೆಝಾನ್ ಸ್ಯಾಮ್ಸಂಗ್ ಆಫರ್.ಕಾಂ ಎಂದಿತ್ತು.
ಆ ಪೇಜಿಗೆ ಕ್ಲಿಕ್ ಮಾಡಿದಾಗ ಫೋನಿನ ಚಿತ್ರವಿರುವ ಪೇಜ್ ಒಂದು ಕಾಣಿಸುತ್ತಿತ್ತು. ಫೋನ್ ಫೀಚರ್ ಅಲ್ಲಿ ವಿವರಿಸಲಾಗಿದ್ದು ಕೆಳೆಗೆ ಈ ಫೋನಿಗೆ 45,901 ರೂ.ಡಿಸ್ಕೌಂಟ್ ಇದ್ದು, ಗ್ರಾಹಕರು ಒಂದು ಗಂಟೆ 34 ನಿಮಿಷಗಳೊಳಗೆ ಆರ್ಡರ್ ಮಾಡಿದರೆ ಆತ ಅಥವಾ ಆಕೆಗೆ ಫೋನ್ ಮರು ದಿನ ಡೆಲಿವರಿ ಮಾಡಲಾಗುವುದು ಎಂದು ಬರೆಯಲಾಗಿತ್ತು.
‘ಬೈ ನೌ’ ಬಟನ್ ಒತ್ತಿದಾಗ ಇನ್ನೊಂದು ಪೇಜ್ ತೆರೆದುಕೊಂಡು ಈ ಮೆಸೇಜನ್ನು ಇನ್ನೂ ಎಂಟು ಮಂದಿಗೆ ಶೇರ್ ಮಾಡಬೇಕು ಹೀಗೆ ಮಾಡಿದರೆ ‘‘ಒಬ್ಬ ಗ್ರಾಹಕ ಒಂದು ಫೋನಿಗಿಂತ ಹೆಚ್ಚು ಖರೀದಿಸದಂತೆ ತಡೆಯಬಹುದು’’ ಎಂದು ತಿಳಿಸಲಾಗಿತ್ತು. ಮೆಸೇಜ್ ಶೇರ್ ಮಾಡದ ಹೊರತು ಫೋನ್ ಡೆಲಿವರಿ ಮಾಡಬೇಕಾದ ವಿಳಾಸ ಟೈಪ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಇದೇ ಲಿಂಕ್ ಪೇಜನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಿದಾಗ ‘ವೆಬ್ ಫೋರ್ಜರಿ’ ಆಗಿದೆ ಎಂಬ ಎಚ್ಚರಿಕೆ ಸಂದೇಶ ದೊರಕಿತ್ತು. ಇಂಟರ್ನೆಟ್ ಬಳಕೆದಾರರು ತಮ್ಮ ಖಾಸಗಿ ಯಾ ಹಣಕಾಸಿನ ವಿವರಗಳನ್ನು ಬಹಿರಂಗ ಪಡಿಸುವ ಟ್ರಿಕ್ ಇದಾಗಿದೆಯೆಂಬ ಎಚ್ಚರಿಕೆಯೂ ಇತ್ತು. ಆ ಪೇಜ್ ನಲ್ಲಿ ಯಾವುದೇ ಮಾಹಿತಿ ನೀಡಿದರೂ ಅದು ದುರುಪಯೋಗವಾಗುವ ಸಂಭವವಿದೆಯೆಂದೂ ಹೇಳಲಾಗಿತ್ತು.
ಇಂತಹ ಲಿಂಕ್ ಗಳನ್ನು ಶೇರ್ ಮಾಡುವ ಮೊದಲು ಅವುಗಳು ವಂಚನೆ ಜಾಲದ ಕೃತ್ಯವೇ ಎಂಬುದನ್ನು ಅರಿಯುವ ಪ್ರಯತ್ನ ನಡೆಸಬೇಕು. ಇನ್ನೊಂದು ಫೋನ್ ಅಥವಾ ಕಂಪ್ಯೂಟರ್ ನಲ್ಲಿ ಇದೇ ಪೇಜ್ ಲಿಂಕ್ ಒತ್ತಿ ಪರೀಕ್ಷಿಸಲು ಪ್ರಯತ್ನಿಸುವುದು ಅಗತ್ಯವಾಗಿದೆ.







