ಶಿಕ್ಷಕರ ಕುಂದು ಕೊರತೆಗಳನ್ನು ಸರಿಪಡಿಸಲು ತಾಲೂಕು ಪಂಚಾಯತ್ ಬದ್ಧ: ಮುಹಮ್ಮದ್ ಮೋನು

ಉಳ್ಳಾಲ, ಸೆ.6: ಸಮಾಜದ ಭವಿಷ್ಯವನ್ನು ಕಾಪಾಡುವ ಶಿಕ್ಷಣ ಇಲಾಖೆಯಲ್ಲಿರುವ ಶಿಕ್ಷಕರ ಜವಾಬ್ದಾರಿಯುತ ಕೆಲಸದಿಂದ ದೇಶದ ಪ್ರತಿಭಾವಂತರು ವಿಶ್ವದಾದ್ಯಂತ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯಿಂದ ಮಾತ್ರ ದೇಶದ ಸಂವಿಧಾನ, ಸಂಪತ್ತು, ನ್ಯಾಯ, ನೀತಿ, ಧರ್ಮವನ್ನು ಕಾಪಾಡಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರ ಎಲ್ಲಾ ಕುಂದು ಕೊರತೆಗಳನ್ನು ಸರಿಪಡಿಸಲು ತಾಲೂಕು ಪಂಚಾಯತ್ ಬದ್ಧ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮಲಾರ್ ಅಭಿಪ್ರಾಯಪಟ್ಟರು.
ಶಿಕ್ಷಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ದಕ್ಷಿಣ ವಲಯ, ಶಿಕ್ಷಕರ ದಿನಾಚರಣಾ ಸಮಿತಿ, ಬೋಳಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಜೆಪ್ಪಿನಮೊಗರು ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಹೆಚ್ಚು ಪ್ರೋತ್ಸಾಹಿಸಿ, ಅವರನ್ನು ಮೇಲೆ ತರುವ ಪ್ರಯತ್ನ ಶಿಕ್ಷಕ ವರ್ಗದಿಂದ ಆಗಬೇಕಿದೆ. ಶಿಕ್ಷಕರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದು, ಅದನ್ನು ಸರಿಪಡಿಸಲು ತಾಲೂಕು ಪಂಚಾಯತ್‌ನಿಂದ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತೇವೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯೋಗ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದೇವರಾಜ್ ಮಾತನಾಡಿ, ವಿಶ್ವದಾದ್ಯಂತ ಶೇ.38 ನಾಸಾ ವಿಜ್ಞಾನಿಗಳು , ಶೇ.36 ರಷ್ಟು ವೈದ್ಯರು, ಶೇ.34 ಮೈಕ್ರೋಸಾಫ್ಟ್ ಉದ್ಯೋಗಿಗಳು, ಶೇ.26 ಇಂಟೆಲ್ ಉದ್ಯೋಗಿಗಳು ಭಾರತ ಮೂಲದವರಾಗಿದ್ದಾರೆ. ಇದರಿಂದ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಹಾಗೂ ಶಿಕ್ಷಕರ ಪಾತ್ರವನ್ನು ಎಲ್ಲರೂ ಮೆಚ್ಚಬೇಕಾಗುತ್ತದೆ. ದೇಶದ ಸ್ಕಿಲ್ ಇಂಡಿಯಾ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಭಾಗವಹಿಸುವ ಮೂಲಕ ಸಮಾಜಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಹೆಚ್ಚು ಕೌಶಲ್ಯ ವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉದ್ಯೋಗಿಗಳಾಗದೆ, ಉದ್ಯೋಗ ಕೊಡುವವರಾಗುವಂತೆ ಮಾಡಬೇಕಿದೆ ಎಂದರು.
ಮಾರ್ಚ್ ತಿಂಗಳಿನಿಂದ ಸರಿಯಾಗಿ ವೇತನ ಸಿಗುತ್ತಿಲ್ಲ
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರು ದಕ್ಷಿಣ ವಲಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮಾತನಾಡಿ ಕಳೆದ ಮಾರ್ಚ್ ನಿಂದ ವೇತನದ ವ್ಯವಸ್ಥೆ ಕಷ್ಟಕರವಾಗಿದೆ. ಹಲವು ಶಿಕ್ಷಕರಿಗೆ ಒಂದು ತಿಂಗಳ ಸಂಬಳ ಇನ್ನೂ ಆಗಿಲ್ಲ. ತಾಂತ್ರಿಕ ದೋಷದ ಕಾರಣ ನೀಡುತ್ತಿದ್ದಾರೆ. ತಂತ್ರಜ್ಞಾನದಲ್ಲಿ ವೇಗದ ಯುಗ. ಎಲ್ಲವೂ ವೇಗವಾಗಿರುವ ಶಿಕ್ಷಕರ ವೇತನವನ್ನು ಕಂಪ್ಯೂಟರಿನಲ್ಲಿ ಅಪ್‌ಲೋಡ್ ಮಾಡಲು 10 ದಿನಗಳು ಬೇಕಾಗುತ್ತದೆ. ಅದನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ. ಬಿಇಒ ಕಚೇರಿಗೆ ಹೋದರೆ ತಾ.ಪಂ.ನ್ನು ತೋರಿಸುತ್ತಾರೆ, ಅಲ್ಲಿಗೆ ಹೋದರೆ ಸೊಸೈಟಿಯನ್ನು ತೋರಿಸುತ್ತಾರೆ. 3 ಕಡೆ ಸುತ್ತುತ್ತಾ ಒಂದು ತಿಂಗಳು ಕಾದಿದ್ದೇವೆ. ಆದರೂ ಸಂಬಳ ಸಿಕ್ಕಿಲ್ಲ. ಮೂರು ತಿಂಗಳಲ್ಲಿ ಇಂತಹ ಸಮಸ್ಯೆ ಆಗುತ್ತಲೇ ಇದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಏಕರೂಪದ ಶಿಕ್ಷಣ ನೀತಿ ಜಾರಿಯಾಗದೇ ಇದ್ದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವುದು ಖಂಡಿತ. 2009 ರಲ್ಲಿ ಆ.29 ರಂದು ರಾಷ್ಟ್ರಪತಿಗಳ ಅಂಕಿತದೊಂದಿಗೆ ಆರ್ ಟಿಈ ಕಾನೂನು ಆರಂಭವಾಗಿದೆ. ಆದರೆ ಕರ್ನಾಟಕದಲ್ಲಿ ಅದು ಭಾರೀ ಕಠಿಣವಾಗಿದೆ. ಆದರೆ ಕೇರಳದಲ್ಲಿ (ಕೆ.ಇ.ಆರ್) ಕೇರಳ ಎಜ್ಯುಕೇಷನ್ ರೂಲ್ಸ್‌ನಲ್ಲಿ ನಾಲ್ಕು ಮಕ್ಕಳಿರುವ ನಾಲ್ಕು ತರಗತಿಗಳು ಕಾರ್ಯಾಚರಿಸುತ್ತಿವೆ. ನಾಲ್ಕು ಶಿಕ್ಷಕರು ಒಬ್ಬ ಮುಖ್ಯ ಶಿಕ್ಷಕ, ಓರ್ವ ಅಟೆಂಡರ್, ಅಕ್ಷರದಾಸೋಹ ಒಟ್ಟು ಏಳು ಸಿಬ್ಬಂದಿ ಇದ್ದಾರೆ. 10ನೆ ವೇತನ ಆಯೋಗದಂತೆ ಕೇಂದ್ರದಿಂದಲೇ ವೇತನ ಬರುತ್ತಿದೆ. 20 ವರ್ಷದ ಅನುಭವದ ಶಿಕ್ಷಕನಿಗೆ ಸಿಗುವ ವೇತನದ 18,000 ಹೆಚ್ಚು ವೇತನ ಕೇರಳದಲ್ಲಿ ಶಿಕ್ಷಕರು ಪಡೆಯುತ್ತಿದ್ದಾರೆ ಎಂದರು.
ಜಿಪಂ ಸದಸ್ಯರಾದ ಧನಲಕ್ಷ್ಮೀ ಗಟ್ಟಿ, ಯು.ಪಿ.ಇಬ್ರಾಹೀಂ, ಕಿನ್ಯಾ ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಬೋಳಿಯಾರು ಪಂಚಾಯತ್ ಮಾಜಿ ಅಧ್ಯಕ್ಷ ಜಬ್ಬಾರ್ ಬೋಳಿಯಾರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಅನುದಾನಿತ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ರಾಧಾಕೃಷ್ಣ ರಾವ್, ತಾಲೂಕು ಉಪಾಧ್ಯಕ್ಷ ಎಂ.ಎಚ್.ಮಲಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜೊನಾಲ್ಡ್ ಲೋಬೊ ಮುಖ್ಯ ಅತಿಥಿಗಳಾಗಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಸ್ವಾಗತಿಸಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಲಕ್ಷ್ಮೀಕಾಂತ್ ವಂದಿಸಿದರು. ಮುಹಮ್ಮದ್ ರಫೀಕ್ ಕಾರ್ಯಕ್ರಮ ನಿರೂಪಿಸಿದರು.
ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಉಳ್ಳಾಲ ಭಾರತ್ ಪ್ರೌಢಶಾಲೆಯ ಶಿಕ್ಷಕಿ ವಿನಯಾ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸಿಟಿಇ ಮಂಗಳೂರು ಕಚೇರಿ ಸಹಾಯಕ ಕೃಷ್ಣಪ್ಪ ಪಡೆದುಕೊಂಡರು. ಈ ಸಂದರ್ಭ ಜಿಲ್ಲೆಯ ನಿವೃತ್ತ ಶಿಕ್ಷಕ-ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.







