ಸಮಾಜದ ಅಭಿವೃದ್ಧಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಅಗತ್ಯ: ಖಾಸಿಂ ದಾರಿಮಿ

ಉಳ್ಳಾಲ, ಸೆ.6: ಕುಟುಂಬವನ್ನು ಬಿಟ್ಟು ವಿದೇಶಗಳಲ್ಲಿ ದುಡಿಯುವ ಅನಿವಾಸಿ ಭಾರತೀಯರ ಸಹಕಾರದಿಂದ ಬಹಳಷ್ಟು ಕಡೆ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಲು ಸಹಕಾರಿಯಾಗಿವೆ. ಬದುಕಿಗಾಗಿ ವಿದೇಶದಲ್ಲಿ ಉದ್ಯೋಗ ಪಡೆದುಕೊಂಡ ಭಾರತೀಯ ಮುಸ್ಲಿಮರಲ್ಲಿ ದಾನಿಗಳೇ ಬಹಳಷ್ಟಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾದುದು ಎಂದು ಶಂಶುಲ್ ಉಲಮಾ ದಾರುಸ್ಸಲಾಂ ಅಕಾಡೆಮಿಯ ಪ್ರಿನ್ಸಿಪಾಲ್ ಖಾಸಿಂ ದಾರಿಮಿ ಹೇಳಿದರು.
ಅವರು ಉರುಮಣೆಯಲ್ಲಿ ಸೋಮವಾರ ನಡೆದ ಶಂಶುಲ್ ಉಲಮಾ ದಾರುಸ್ಸಲಾಂ ಅಕಾಡೆಮಿಯ ಕಾಲೇಜ್ ಕಟ್ಟಡದ ಅಭಿವೃದ್ಧಿ ಪ್ರಯುಕ್ತ ನಡೆದ ಗಲ್ಫ್ ಮೀಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮನುಷ್ಯ ಅಭಿವೃದ್ಧಿಯಾಗಬೇಕಾದರೆ ಆತನಿಗೆ ಧಾರ್ಮಿಕ ಮತ್ತು ಲೌಕಿಕ ಜ್ಞಾನ ಅಗತ್ಯ. ಇವು ಇಲ್ಲದಿದ್ದರೆ ಸಮಾಜ ಬೆಳೆಯದು. ಉತ್ತಮ ಸಮಾಜದ ಬೆಳವಣಿಗೆಗೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ನಾವು ಮಾಡಬೇಕಾಗಿದೆ ಎಂದರು.
ಸಯ್ಯದ್ ಅಮೀರ್ ತಂಙಳ್ ದುಆ ನೆರವೇರಿಸರು. ಸೈಯದ್ ಬಾತಿಷಾ ತಂಙಳ್ ಆನೆಕಲ್ ಮಾತನಾಡಿದರು. ಉರುಮಣೆ ಮಸೀದಿ ಖತೀಬ್ ಮುಹಮ್ಮದ್ ಅಲಿ ದಾರಿಮಿ, ಕಿನ್ಯ ಮದ್ರಸದ ಸದರ್ ಫಾರೂಕ್ ದಾರಿಮಿ ಉಪಸ್ಥಿತರಿದ್ದರು. ಕಿನ್ಯ ಮಸೀದಿ ಕಾರ್ಯದರ್ಶಿ ಅಬೂಸಾಲಿ ಹಾಜಿ ಸ್ವಾಗತಿಸಿದರು. ದಾರುಸ್ಸಲಾಂ ಅಕಾಡೆಮಿಯ ಕಾರ್ಯದರ್ಶಿ ಸಿರಾಜ್ ವಂದಿಸಿದರು.







