ದಾನಿಗಳು ಎಷ್ಟೇ ಇದ್ದರೂ ರಕ್ತದ ಕೊರತೆ ನೀಗದು: ಅಬ್ದುರ್ರಶೀದ್
ತೊಕ್ಕೊಟ್ಟು: ಹೆಲ್ಪ್ ಇಂಡಿಯಾ ಫೌಂಡೇಶನ್‌ನಿಂದ ರಕ್ತದಾನ ಶಿಬಿರ

ಉಳ್ಳಾಲ, ಸೆ.6: ಒಂದು ಕಾಲದಲ್ಲಿ ರಕ್ತದ ಕೊರತೆಯಿಂದ ಅದೆಷ್ಟೋ ಜೀವ ಹಾನಿಯಾಗಿವೆ. ಆದರೆ ಇಂದು ಜನತೆಗೆ ರಕ್ತದ ಮಹತ್ವದ ಅರಿವಾಗಿದ್ದು ದಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೂ ರಕ್ತದ ಕೊರತೆ ನೀಗಿಸಲು ಅಸಾಧ್ಯ ಎಂದು ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುರ್ರಶೀದ್ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಹೆಲ್ಪ್ ಇಂಡಿಯಾ ಫೌಂಡೇಶನ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಯುನೈಟೆಡ್ ಬ್ರದರ್ಸ್ ಚಂದಹಿತ್ಲು ಇದರ ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ ಸಹಕಾರದಲ್ಲಿ ರವಿವಾರ ತೊಕ್ಕೊಟ್ಟಿನಲ್ಲಿ ನಡೆದ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಆರೋಗ್ಯ ಕಾರ್ಡ್ ನೋಂದಾವಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ದಿನಕ್ಕೊಂದು ಸಂಘಟನೆ ಹುಟ್ಟುತ್ತಿದ್ದು, ಒಂದೆರಡು ಕಾರ್ಯಕ್ರಮ ನಡೆಸಿದ ಬಳಿಕ ಆರ್ಥಿಕ ವಿಚಾರದಲ್ಲಿ ಚರ್ಚೆ ನಡೆದು ಬಳಿಕ ಕಾರ್ಯಚಟುವಟಿಕೆ ನಿಲ್ಲುವುದು ಸಾಮಾನ್ಯ. ಹೆಲ್ಪ್ ಇಂಡಿಯಾ ಫೌಂಡೇಶನ್ ಪದಾಧಿಕಾರಿಗಳು ಆರ್ಥಿಕವಾಗಿ ಬಲಿಷ್ಠರಾಗಿರುವುದರಿಂದ ಸಮಾಜ ಸೇವಾ ಚಟುವಟಿಕೆಗಳು ನಿರಂತರ ನಡೆಯುತ್ತಿದೆ. ಜಾತ್ಯತೀತ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳು ಸೌಹಾರ್ದ, ಶಾಂತಿಯುತ ಉಳ್ಳಾಲ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಹೆಲ್ಪ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ನಾಸಿರ್ ಮೊಯ್ದೀನ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಮುಹಮ್ಮದ್ ಅಲಿ, ಯೆನೆಪೊಯ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ.ಎಂ.ಎಚ್.ಶರೀಫ್, ಉದ್ಯಮಿ ಬಿ.ಶಬೀರ್, ಹೆಲ್ಪ್ ಇಂಡಿಯಾ ಸದಸ್ಯರಾದ ರಾಝಿಕ್ ಉಳ್ಳಾಲ್, ಇಸ್ಮಾಯೀಲ್, ಬ್ಲಡ್ ಹೆಲ್ಪ್‌ಲೈನ್‌ನ ಶಬೀರ್, ಯುನೈಟೆಡ್ ಬ್ರದರ್ಸ್‌ನ ಅಧ್ಯಕ್ಷ ಹನೀಫ್ ಶೈನ್, ಪತ್ರಕರ್ತ ಆರಿಫ್ ಮಚ್ಚಂಪಾಡಿ, ನಗರಸಭೆಯ ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು, ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ ಮುರಳೀಧರ ಶೆಟ್ಟಿ ಮೋರ್ಲ ಮೊದಲಾದವರು ಉಪಸ್ಥಿತರಿದ್ದರು.
ಝಾಕೀರ್ ಹುಸೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕೀಲ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.







