ಶಿಕ್ಷಕರಲ್ಲಿ ಶಿಸ್ತು, ಕ್ಷಮೆ, ಕರುಣೆ ಅಗತ್ಯ: ಶಕುಂತಳಾ ಶೆಟ್ಟಿ

ಪುತ್ತೂರು, ಸೆ.6: ನಿವೃತ್ತಿಯ ಬಳಿಕವೂ ಗೌರವ ಸಿಗುವ ಹುದ್ದೆ ಎಂದರೆ ಅದು ಶಿಕ್ಷಕ ಹುದ್ದೆ. ಶಿಕ್ಷರಲ್ಲಿ ಶಿಸ್ತು, ಕ್ಷಮೆ, ಕರುಣೆ ಇದ್ದರೆ ಮಕ್ಕಳು ಸರಿ ದಾರಿಗೆ ಹೋಗುತ್ತಾರೆ. ಆದರೆ ಶಿಕ್ಷಕರಾಗಿ ಕೆಲಸ ಮಾಡುವವರು ಬರೀ ಸಂಬಳದ ಶಿಕ್ಷಕರಾಗಬಾರದು. ಇಚ್ಛಾಶಕ್ತಿಯುಳ್ಳವರಾಗಿದ್ದುಕೊಂಡು ಸಮಾಜ ನಿರ್ಮಾಣ ಮಾಡುವ ಶಿಕ್ಷಕರಾಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಪುತ್ತೂರಿನ ಗುರುಭವನದಲ್ಲಿ ಗುರುವಾರ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧ್ಯಾಪಕರುಗಳ ಕೈಯಲ್ಲಿ ಬೆಳೆಯುವ ಮಗು ಸಮಾಜದಲ್ಲಿ ಬೆಳೆಯುತ್ತದೆ. ಒಳ್ಳೆಯ ಅಧ್ಯಾಪಕನಿಗೆ ನಿವೃತ್ತಿ ಬಳಿಕವು ಗೌರವ ಸಿಗುತ್ತದೆ. ಆದರೆ ನಾನು ಕಂಡುಕೊಂಡ ಹಾಗೆ ಶಾಲೆಯ ಒಳಗೇ ಒಂದು ಅಧ್ಯಾಪಕರ ಬಗ್ಗೆ ಇನ್ನೊಂದು ಅಧ್ಯಾಪಕರು ಟೀಕಿಸುವುದು, ಬಸ್‌ನಲ್ಲಿ ಇಲಾಖೆಯನ್ನು ಬೈಯುವುದು ಕಂಡಾಗ ಶಿಕ್ಷಕರಿಗೆ ಎಷ್ಟು ಗೌರವ ಸಿಗಬಹುದು ಎಂಬುದನ್ನು ಚಿಂತಿಸಬೇಕಾಗಿದೆ ಎಂದರು.
ಎಲ್ಲಾ ಶಾಲೆಗಳ ಎಸ್‌ಡಿಎಂಸಿ ಮತ್ತು ಶಿಕ್ಷಕರೊಳಗೆ ಜಟಾಪಟಿ, ಶಾಲೆಯ ಒಳಗಡೆ ಅಧಿಕಾರಿಗಳೊಂದಿಗೆ ಜಟಾಪಟಿ ವಿಚಾರಗಳೇ ಕೇಳಿ ಬರುತ್ತಿದ್ದು, ಶಿಕ್ಷಕರೊಳಗೆ ಉತ್ತಮ ಬಾಂಧವ್ಯ ಇಲ್ಲದಿದ್ದರೆ ಖಂಡಿತವಾಗಿಯೂ ಸಮಾಜ ಉದ್ಧಾರ ಆಗುವುದಿಲ್ಲ ಎಂದ ಅವರು ರಾಜಕೀಯ ಬೆಳೆಸಬೇಡಿ. ಮಕ್ಕಳನ್ನು ಛೂಬಿಡುವ ಕೆಲಸ ಮಾಡಬೇಡಿ. ಅದರ ಬದಲು ಸಮಾಜಕ್ಕೆ ಬೆಳಕು ನೀಡುವ ಶಿಕ್ಷಕರಾಗಿ ಎಂದು ಕಿವಿಮಾತು ಹೇಳಿದರು.
ಬೆಳ್ತಂಗಡಿ ಗುರುದೇವ ಪದವಿ ಕಾಲೇಜಿನ ಉಪನ್ಯಾಸಕ ಎ.ಕೃಷ್ಣಪ್ಪ ಪೂಜಾರಿ ಮಾತನಾಡಿ, ಶಿಕ್ಷಕರು ಜೀವನ ಧರ್ಮದ ರಾಯಭಾರಿಗಳಾಗಬೇಕೆ ಹೊರತು, ಅಲ್ಲಿ ರಾಜಕೀಯ ಪ್ರವೇಶ ಇರಬಾರದು ಎಂದರು. ಶಿಕ್ಷಕರು ಚಾರಿತ್ರ್ಯವಂತ ವಿದ್ಯಾವಂತರನ್ನು ನಿರ್ಮಾಣ ಮಾಡಿದರೆ ರಾಷ್ಟ್ರ ನಿರ್ಮಾಣ ಮಾಡಿದಂತೆ. ಆಗ ಶಿಕ್ಷಕ ಜಗಮೆಚ್ಚಿದ ಶಿಕ್ಷಕನಾಗುತ್ತಾನೆ ಎಂದರು.
ಕಳೆದ ವರ್ಷ ರಾಜ್ಯ ಪ್ರಶಸ್ತಿ ವಿಜೇತ ಸೈಂಟ್ ಫಿಲೋಮಿನಾ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಪುರುಷೋತ್ತಮ ಗೌಡ ಎಂ.ಎಸ್. ಮತ್ತು ಜಿಲ್ಲಾ ಪ್ರಶಸ್ತಿ ವಿಜೇತ ಸೈಂಟ್ ಜಾರ್ಜ್ ಪ್ರೌಢ ಶಾಲೆಯ ಉಲಹನ್ನನ್ ಪಿ.ಎಂ., ಪುತ್ತಿಗೆ ಶಾಲೆಯ ಹನುಮಂತಪ್ಪ ಕೆ. ಅವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ತಾಲೂಕು ಪಂಚಾಯತ್ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ರಾಧಾಕೃಷ್ಣ ಬೋರ್ಕರ್, ಜಯಂತಿ ಆರ್. ಗೌಡ, ತೇಜಸ್ವಿನಿ ಶೇಖರ್ ಗೌಡ, ಶಿಕ್ಷಕರ ದಿನಾಚರಣಾ ಸಮಿತಿ ಉಪಾಧ್ಯಕ್ಷ ತಹಶೀಲ್ದಾರ್ ಪುಟ್ಟ ಶೆಟ್ಟಿ ಅತಿಥಿಗಳಾಗಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನೇಶ್ ವಂದಿಸಿದರು. ರಾಮಕುಂಜ ಪದವಿ ಪೂರ್ವ ಕಾಲೇಜಿನ ನಾರಾಯಣ ಭಟ್ ಟಿ. ಕಾರ್ಯಕ್ರಮ ನಿರೂಪಿಸಿದರು.
ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಆಳ್ವ ಸಾಜ, ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಮಾಮಚ್ಚನ್, ಜಿಲ್ಲಾ ಸಂಘದ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶೇಷಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.







