ಕಟೀಲು ದೇವರ ನಿಂದನೆ: ಜಿಲ್ಲಾ ಕಾಂಗ್ರೆಸ್ ಖಂಡನೆ
ಮಂಗಳೂರು, ಸೆ.6: ಕಟೀಲು ಕ್ಷೇತ್ರದ ದೇವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಕೃತ್ಯವನ್ನು ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ನಗರದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಸಮಾಜದ ಶಾಂತಿಗೆ ಭಂಗ ತರುವಂತಹ ಇಂತಹ ಕೃತ್ಯದ ಹಿಂದಿರುವವರನ್ನು ಕೂಡಲೇ ಪತ್ತೆಹಚ್ಚಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಅಗತ್ಯ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳುವಂತೆ ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಮಂಗಳೂರು ಪೊಲೀಸ್ ಆಯುಕ್ತರಿಗೆ ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿರುವುದಾಗಿ ಅವರು ಹೇಳಿದರು.
ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನ ಸಹಿತ ಯಾವುದೇ ಧರ್ಮದ ನೈಜ ಅನುಯಾಯಿ ಇನ್ನೊಂದು ಧರ್ಮವನ್ನು ನಿಂದಿಸಲಾರ. ಅವಹೇಳನ ಮಾಡಲಾರ. ಯಾಕೆಂದರೆ ಜಗತ್ತಿನ ಯಾವುದೇ ಧರ್ಮ ಪರ ಧರ್ಮ ನಿಂದನೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ ಮಾಜಿ ಸಂಸದೆ, ಚಲನಚಿತ್ರ ನಟಿ ರಮ್ಯಾ ಅವರಿಗೆ ಕೆಲವು ದುಷ್ಕರ್ಮಿಗಳು ಮೊಟ್ಟೆ, ಕಲ್ಲು, ಚಪ್ಪಲಿ ಎಸೆಯಲು ನಡೆಸಿದ ಪ್ರಯತ್ನ ಕೂಡ ಖಂಡನೀಯ. ಮಹಿಳೆಗೆ ಮಾತೆಯ ಸ್ಥಾನ ನೀಡಿದ ಈ ನಾಡಿನಲ್ಲಿ ನಡೆಸಿದ ಈ ಕೃತ್ಯ ಯಾವುದೇ ಪಕ್ಷಕ್ಕೆ ಭೂಷಣವಲ್ಲ ಎಂದವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮುಖಂಡರಾದ ಬಲರಾಜ ರೈ, ಶಶಿಧರ ಹೆಗ್ಡೆ, ಟಿ.ಕೆ. ಸುಧೀರ್, ಪದ್ಮನಾಭ ನರಿಂಗಾನ, ನವೀನ್‌ಡಿಸೋಜ, ಎಸ್. ಅಪ್ಪಿ, ವಿಶ್ವಾಸ್‌ದಾಸ್, ಹನೀಫ್, ಅಶೋಕ್ ಡಿ.ಕೆ., ನಜೀರ್ ಬಜಾಲ್, ರಮಾನಂದ ಪೂಜಾರಿ ಉಪಸ್ಥಿತರಿದ್ದರು.







