ಹಾಸನ: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಜೆಡಿಎಸ್‌ನಿಂದ ಧರಣಿ
.jpg)
ಹಾಸನ, ಸೆ.6: ತಮಿಳುನಾಡಿಗೆ ಕರ್ನಾಟಕ ರಾಜ್ಯದಿಂದ ನೀರು ಹರಿಸುವುದನ್ನು ಖಂಡಿಸಿ ಗೊರೂರಿನಲ್ಲಿ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಧರಣಿ ನಡೆಯಿತು.
ತಾಲ್ಲೂಕಿನ ಗೊರೂರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಅಣೆಕಟ್ಟು ಮುಖ್ಯ ದ್ವಾರದವರೆಗೂ ನಡೆದು ನಂತರ ಇಂಜಿನಿಯರ್‌ರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಜಾನುವಾರುಗಳಿಗೆ ಹಾಗೂ ಕುಡಿಯುವ ನೀರಿಗೆ ಅಹಕಾರ ಉಂಟಾಗಿರುವಾಗ ತಮಿಳುನಾಡಿಗೆ ಬಿಡಲು ಹೊರಟಿರುವುದನ್ನು ಖಂಡಿಸಿದ ಅವರು ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಘೋಷಣೆ ಕೂಗಿದರು.
ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ರೈತನು ಆಕಾಶದತ್ತ ತಲೆ ಎತ್ತಬೇಕಾಗಿದೆ. ಹಾಸನದ ಜೀವನಾಡಿ ಹೇಮಾವತಿಯಲ್ಲಿ ಒಟ್ಟು ನೀರಿನ ಜಲಾಶಯ ಮಟ್ಟ 37.103 ಇದ್ದು, ನೀರಿನ ಮಟ್ಟ 17.289 ಮಾತ್ರ ಇದೆ. ಇಲ್ಲಿಂದ ತುಮಕೂರು ಮತ್ತು ಬೆಂಗಳೂರಿಗೂ ಕೂಡ ನೀರು ಹರಿಸಲಾಗುತ್ತಿದೆ ಎಂದು ಹೇಳಿದ ಅವರು ಜಲಾಶಯದಲ್ಲೆ ನೀರು ಇಲ್ಲದಿರುವಾಗ ನೀರು ಬಿಡುವ ತೀರ್ಮಾನವನ್ನು ಖಂಡಿಸಿದರು.
ಧರಣಿಯಲ್ಲಿ ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್, ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಂ, ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಜೆಡಿಎಸ್ ಮುಖಂಡ ಕೆ.ಎಂ.ರಾಜೇಗೌಡ, ನಗರಸಭೆ ಸದಸ್ಯರಾದ ಎಚ್.ಬಿ. ಗೋಪಾಲ್ ಇತರರು ಪಾಲ್ಗೊಂಡಿದ್ದರು.







