ಬುಧವಾರ ಪ್ಯಾರಾಲಿಂಪಿಕ್ ಗೇಮ್ಸ್ ಆರಂಭ
ಭಾರತದಿಂದ ಗರಿಷ್ಠ ಸ್ಪರ್ಧಿಗಳು ಕಣಕ್ಕೆ

ರಿಯೋ ಡಿ ಜನೈರೊ, ಸೆ.6: ಪ್ಯಾರಾಲಿಂಪಿಕ್ ಗೇಮ್ಸ್ ಬುಧವಾರ ಬ್ರೆಝಿಲ್‌ನಲ್ಲಿ ಆರಂಭವಾಗಲಿದೆ. ಈ ಬಾರಿ ಗರಿಷ್ಠ ಸಂಖ್ಯೆಯ ಅಥ್ಲೀಟ್‌ಗಳು ಭಾರತವನ್ನು ಪ್ರತಿನಿಧಿಸಲಿದ್ದು, ಪದಕಗಳ ಸಂಖ್ಯೆ ಹೆಚ್ಚಿಸುವ ವಿಶ್ವಾಸ ಮೂಡಿಸಿದ್ದಾರೆ.
ಸೆ.7ರಿಂದ 18ರ ತನಕ ನಡೆಯಲಿರುವ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಭಾರತದ ಒಟ್ಟು 19 ಅಥ್ಲೀಟ್‌ಗಳು 10 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ಭಾರತ ತಂಡದಲ್ಲಿ 2004ರ ಅಥೆನ್ಸ್ ಗೇಮ್ಸ್‌ನಲ್ಲಿ ಭಾರತಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊತ್ತ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದ ದೇವೇಂದ್ರ ಝಜಾರಿಯಾ ಅವರಿದ್ದಾರೆ. ಈ ಬಾರಿ ಅವರು ಜಾವೆಲಿನ್ ಎಸೆತದಲ್ಲಿ ಪದಕ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ.
2016ರ ಪ್ಯಾರಾಲಿಂಪಿಕ್ಸ್‌ನಲ್ಲಿ ವಿಶ್ವದ 4,300 ಅಥ್ಲೀಟ್‌ಗಳು 23 ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
ಈ ಬಾರಿಯ ಗೇಮ್ಸ್‌ನಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಸೈಕ್ಲಿಂಗ್, ಕುದುರೆ ಸವಾರಿ, ಸಣ್ಣದೋಣಿ ಸ್ಪರ್ಧೆ, ಫುಟ್ಬಾಲ್(5 ಹಾಗೂ 7 ಆಟಗಾರರಿರುವ ತಂಡ), ಗೋಲ್‌ಬಾಲ್, ಜುಡೊ, ಪ್ಯಾರಾ-ಟ್ರ್ರಿಯಾಥ್ಲಾನ್, ಪವರ್‌ಲಿಫ್ಟಿಂಗ್, ರೋವಿಂಗ್, ಸೈಲಿಂಗ್, ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ವಾಲಿಬಾಲ್, ವೀಲ್‌ಚೇರ್ ಬಾಸ್ಕೆಟ್‌ಬಾಲ್, ವೀಲ್‌ಚೇರ್ ಫೆನ್ಸಿಂಗ್, ವೀಲ್‌ಚೇರ್ ಟೆನಿಸ್, ವೀಲ್‌ಚೇರ್ ರಗ್ಬಿಯಲ್ಲದೆ, ಕಾಯಕ್-ದೋಣಿ ಸ್ಪರ್ಧೆ ಹಾಗೂ ಟ್ರಿಯಾಥ್ಲಾನ್ ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳಲಿವೆ.
ಭಾರತ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಈ ತನಕ ಒಟ್ಟು 8 ಪದಕಗಳನ್ನು ಜಯಿಸಿದೆ. ಇದರಲ್ಲಿ 2 ಚಿನ್ನ, 3 ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳಿವೆ. ಈ ಪೈಕಿ ಒಂದು ಚಿನ್ನ, ಮೂರು ಬೆಳ್ಳಿ ಹಾಗು ಎರಡು ಕಂಚಿನ ಪದಕಗಳನ್ನು ಅಥ್ಲೆಟಿಕ್ಸ್ ವಿಭಾಗದಲ್ಲಿ ಜಯಿಸಿದೆ. ಸ್ವಿಮ್ಮಿಂಗ್ ಹಾಗೂ ಪವರ್‌ಲಿಫ್ಟಿಂಗ್‌ನಲ್ಲಿ ಕ್ರಮವಾಗಿ ತಲಾ ಒಂದು ಚಿನ್ನ ಹಾಗೂ ಕಂಚಿನ ಪದಕ ಜಯಿಸಿದೆ.
ಭಾರತದ ಪ್ಯಾರಾಲಿಂಪಿಕ್ಸ್ ತಂಡ:
ಪುರುಷರು: ಮರಿಯಪ್ಪನ್ ತಂಗವೇಲು(ಹೈಜಂಪ್), ವರುಣ್ ಸಿಂಗ್(ಹೈಜಂಪ್), ಶರದ್ ಕುಮಾರ್(ಹೈಜಂಪ್), ರಾಂಪಾಲ್ ಚಾಹರ್(ಹೈಜಂಪ್), ಸುಂದರ್ ಸಿಂಗ್ ಗುರ್ಜರ್(ಜಾವೆಲಿನ್ ಎಸೆತ), ದೇವೇಂದ್ರ ಝಜಾರಿಯಾ(ಜಾವೆಲಿನ್ ಎಸೆತ), ರಿಂಕು(ಜಾವೆಲಿನ್ ಎಸೆತ), ನರೇಂದ್ರ ರಣಬೀರ್(ಜಾವೆಲಿನ್ ಎಸೆತ), ಸಂದೀಪ್(ಜಾವೆಲಿನ್ ಎಸೆತ), ಅಮಿತ್ ಕುಮಾರ್ (ಕ್ಲಬ್ ಥ್ರೊ), ಧರ್ಮಬೀರ್(ಕ್ಲಬ್ ಥ್ರೊ), ಅಂಕುರ್ ಧಾಮಾ(1,500 ಮೀ.), ಬಾಷಾ ಫರ್ಮನ್(ಪವರ್‌ಲಿಫ್ಟಿಂಗ್), ಸುಯಾಶ್ ನಾರಾಯಣ್ ಜಾಧವ್(ಸ್ವಿಮ್ಮಿಂಗ್), ನರೇಶ್ ಕುಮಾರ್ ಶರ್ಮ(ಶೂಟಿಂಗ್) ವೀರೇಂದ್ರ ಧಂಕಾ(ಜಾವೆಲಿನ್, ಶಾಟ್‌ಪುಟ್).
ಮಹಿಳೆಯರು: ಪೂಜಾ(ಆರ್ಚರಿ), ದೀಪಾ ಮಲಿಕ್(ಶಾಟ್‌ಪುಟ್), ಕರಮ್‌ಜ್ಯೋತಿ ದಲಾಲ್(ಡಿಸ್ಕಸ್).
ಪದಕ ವಿಜೇತರಾಗುವ ಭಾರತದ ಪ್ಯಾರಾಲಿಂಪಿಯನ್‌ಗೆ ಕ್ರೀಡಾ ಸಚಿವಾಲಯ ಬಹುಮಾನ ಘೋಷಣೆ
ಹೊಸದಿಲ್ಲಿ, ಸೆ.6: ರಿಯೋಡಿ ಜನೈರೊದಲ್ಲಿ ಬುದವಾರ ಆರಂಭವಾಗಲಿರುವ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನಲ್ಲಿ ಪದಕ ಗೆಲ್ಲಲಿರುವ ಅಥ್ಲೀಟ್‌ಗಳಿಗೆ ಕ್ರೀಡಾ ಸಚಿವಾಲಯ ಬಹುಮಾನ ನೀಡಲು ನಿರ್ಧರಿಸಿದೆ. ಕಳೆದ ತಿಂಗಳು ನಡೆದ ಒಲಿಂಪಿಕ್ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ನೀಡಿದ್ದಷ್ಟೇ ಬಹುಮಾನ ಮೊತ್ತವನ್ನು ಪ್ಯಾರಾಲಿಂಪಿಯನ್‌ಗೂ ಸರಕಾರ ಘೋಷಿಸಿದೆ.
‘‘ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವವರಿಗೆ 75 ಲಕ್ಷ ರೂ., ಬೆಳ್ಳಿ ಪದಕ ಗೆಲ್ಲುವವರಿಗೆ 50 ಲಕ್ಷ ರೂ. ಹಾಗೂ ಕಂಚಿನ ಪದಕ ಗೆಲ್ಲುವವರಿಗೆ 30 ಲಕ್ಷ ರೂ. ನಗದು ಬಹುಮಾನವನ್ನು ಕ್ರೀಡಾ ಸಚಿವಾಲಯ ನೀಡಲಿದೆ’’ ಎಂದು ಸಚಿವಾಲಯ ತನ್ನ ಅಧಿಕೃತ ಟ್ವಿಟರ್‌ನಲ್ಲಿ ತಿಳಿಸಿದೆ.







