ಯುಎಸ್ ಓಪನ್: ಸಾನಿಯಾ-ಸ್ಟ್ರಿಕೊವಾ ಕ್ವಾರ್ಟರ್ ಫೈನಲ್‌ಗೆ
ಬೋಪಣ್ಣ ಹೋರಾಟ ಅಂತ್ಯ

ನ್ಯೂಯಾರ್ಕ್, ಸೆ.6: ಯುಎಸ್ ಓಪನ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಾನಿಯಾ ಮಿರ್ಝಾ ಹಾಗೂ ಬಾರ್ಬರ ಸ್ಟ್ರಿಕೊವಾ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ
ಆದರೆ, ಭಾರತದ ರೋಹನ್ ಬೋಪಣ್ಣ ಹಾಗೂ ಕೆನಡಾದ ಗಾಬ್ರಿಯೆಲ್ ಡಾಬ್ರೊವ್‌ಸ್ಕಿ ಮಿಶ್ರ ಡಬಲ್ಸ್‌ನಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಇಂಡೋ-ಝೆಕ್‌ನ ಸಾನಿಯಾ-ಸ್ಟ್ರಿಕೊವಾ ಸೋಮವಾರ ಇಲ್ಲಿ ನಡೆದ ಮೂರನೆ ಸುತ್ತಿನ ಪಂದ್ಯದಲ್ಲಿ ಅಮೆರಿಕ-ಜಪಾನ್‌ನ ನಿಕೊಲ್ ಗಿಬ್ಸ್ ಹಾಗೂ ನಾವೊ ಹಿಬಿನೊ ಅವರನ್ನು 6-4, 7-5 ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಅಂತಿಮ-8ರ ಘಟ್ಟ ತಲುಪಿದರು.
ಏಳನೆ ಶ್ರೇಯಾಂಕದ ಸಾನಿಯಾ-ಸ್ಟ್ರಿಕೊವಾ ಫ್ರೆಂಚ್‌ನ ಅಗ್ರ ಶ್ರೇಯಾಂಕದ ಕಾರೊಲಿನ್ ಗಾರ್ಸಿಯಾ ಹಾಗೂ ಕ್ರಿಸ್ಟಿನಾ ಮ್ಲಾಡೆನೊವಿಕ್‌ರನ್ನು ಎದುರಿಸಲಿದ್ದಾರೆ.
ರೋಹನ್ ಬೋಪಣ್ಣ ಹಾಗೂ ಲಿಯಾಂಡರ್ ಪೇಸ್ ಮಿಶ್ರ ಡಬಲ್ಸ್ ಸ್ಪರ್ಧೆಗಳಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿರುವ ಕಾರಣ ಸಾನಿಯಾ ಮಾತ್ರ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರ್ತಿ.
ಸೋಮವಾರ ನಡೆದ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಬೋಪಣ್ಣ ಹಾಗೂ ಗಾಬ್ರಿಯೆಲ್ ಉತ್ತಮ ಆರಂಭವನ್ನು ಪಡೆದಿದ್ದರೂ ಕೊಲಂಬಿಯಾದ ರಾಬರ್ಟ್ ಫರ್ಹಾ ಹಾಗೂ ಜರ್ಮನಿಯ ಅನ್ನಾ-ಲೆನಾ ಗ್ರಾನ್‌ಯೆನ್‌ಫೆಲ್ಡ್ ವಿರುದ್ಧ 58 ನಿಮಿಷಗಳ ಹೋರಾಟದಲ್ಲಿ 6-1, 2-6, 8-10 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಹಾಲಿ ಚಾಂಪಿಯನ್ ಪೇಸ್ ಹಾಗೂ ಅವರ ಸ್ವಿಸ್ ಜೊತೆಗಾರ್ತಿ ಮಾರ್ಟಿನಾ ಹಿಂಗಿಸ್ ಟೂರ್ನಿಯ ಎರಡನೆ ಸುತ್ತಿನಲ್ಲಿ ಅಮೆರಿಕದ ಕೊಕೊ ವಾಂಡೆವೆಘ್ ಹಾಗೂ ರಾಜೀವ್ ರಾಮ್ ವಿರುದ್ಧ ಸೋತು ನಿರಾಸೆಗೊಳಿಸಿದ್ದರು.
ವಾವ್ರಿಂಕ,ಮರ್ರೆ ಕ್ವಾರ್ಟರ್‌ಫೈನಲ್‌ಗೆ:
ಡಬಲ್ ಗ್ರಾನ್‌ಸ್ಲಾಮ್ ವಿನ್ನರ್ ಸ್ಟಾನ್ ವಾವ್ರಿಂಕ ಯುಎಸ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಉಕ್ರೇನ್‌ನ ಇಲಿಯಾ ಮರ್ಚೆಂಕೊರನ್ನು 6-4, 6-1, 6-7(5), 6-3 ಸೆಟ್‌ಗಳ ಅಂತರದಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ತಲುಪಿದರು.
2014ರ ಆಸ್ಟ್ರೇಲಿಯನ್ ಓಪನ್ ಹಾಗೂ 2015ರ ಫ್ರೆಂಚ್ ಓಪನ್ ಚಾಂಪಿಯನ್ ಸ್ವಿಸ್‌ನ ವಾವ್ರಿಂಕ ಮುಂದಿನ ಸುತ್ತಿನಲ್ಲಿ 2009ರ ಚಾಂಪಿಯನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಎದುರಿಸಲಿದ್ದಾರೆ.
ಮರ್ರೆ ಕ್ವಾರ್ಟರ್ ಫೈನಲ್‌ಗೆ
ನ್ಯೂಯಾರ್ಕ್, ಸೆ.6: ಗ್ರಿಗೊರ್ ಡಿಮಿಟ್ರೊವ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಆ್ಯಂಡಿ ಮರ್ರೆ ಅಮೆರಿಕನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಸೋಮವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಮರ್ರೆ ಬೆಲ್ಜಿಯಂನ ಡಿಮಿಟ್ರೊವ್‌ರನ್ನು 6-1, 6-2, 6-2 ನೇರ ಸೆಟ್‌ಗಳಿಂದ ಮಣಿಸಿದರು. ಎರಡು ಬಾರಿ ವಿಂಬಲ್ಡನ್ ಟ್ರೋಫಿ ಹಾಗೂ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಮರ್ರೆ ಮುಂದಿನ ಸುತ್ತಿನಲ್ಲಿ ಜಪಾನ್‌ನ ಕೀ ನಿಶಿಕೊರಿ ಅವರನ್ನು ಎದುರಿಸಲಿದ್ದಾರೆ. ನಿಶಿಕೊರಿ ಇವೊ ಕಾರಿಯೊವಿಕ್‌ರನ್ನು 6-3, 6-4,7-6(4) ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಫೆಡರರ್ ದಾಖಲೆ ಮುರಿದ ಸೆರೆನಾ ಅಂತಿಮ-8ಕ್ಕೆ
ನ್ಯೂಯಾರ್ಕ್, ಸೆ.6: ಅಮೆರಿಕದ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮತ್ತೊಂದು ದಾಖಲೆ ನಿರ್ಮಿಸಿದರು. ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 308ನೆ ಗೆಲುವು ಸಂಪಾದಿಸಿದ ಸೆರೆನಾ ಪ್ರಮುಖ ಟೂರ್ನಿಗಳಲ್ಲಿ ಗರಿಷ್ಠ ಗೆಲುವು ಸಾಧಿಸಿರುವ ರೋಜರ್ ಫೆಡರರ್ ದಾಖಲೆಯನ್ನು ಮುರಿದಿದ್ದಾರೆ.
ಸೋಮವಾರ ನಡೆದ ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಕಝಕ್‌ನ ಯಾರೊಸ್ಲಾವಾ ಶ್ವಡೋವಾರನ್ನು 6-2, 6-3 ನೇರ ಸೆಟ್‌ಗಳಿಂದ ಸುಲಭವಾಗಿ ಮಣಿಸಿದ ವಿಲಿಯಮ್ಸ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಸೆರೆನಾ ಮುಂದಿನ ಸುತ್ತಿನಲ್ಲಿ ರೊಮಾನಿಯದ ಸಿಮೊನಾ ಹಾಲೆಪ್‌ರನ್ನು ಎದುರಿಸಲಿದ್ದಾರೆ. ಹಾಲೆಪ್ ಮತ್ತೊಂದು ಪಂದ್ಯದಲ್ಲಿ ಸ್ಪ್ಪೇನ್‌ನ ಕಾರ್ಲ ಸುಯರೆಝ್‌ರನ್ನು 6-2, 7-5 ಸೆಟ್‌ಗಳ ಅಂತರದಿಂದ ಸೋಲಿಸಿದ್ದರು.
‘‘ನಿಜವಾಗಲೂ ಇದೊಂದು ನಿಜಕ್ಕೂ ರೋಮಾಂಚನಕಾರಿ. 308ನೆ ಗೆಲುವು ನನ್ನ ಪಾಲಿಗೆ ಯಾವಾಗಲೂ ಮ್ಯಾಜಿಕ್ ನಂಬರ್ ಆಗಿತ್ತು’’ ಎಂದು ಸ್ವಿಸ್ ಸೂಪರ್ ಸ್ಟಾರ್ ಫೆಡರರ್ ದಾಖಲೆ ಮುರಿದ ಬಳಿಕ ಸೆರೆನಾ ಪ್ರತಿಕ್ರಿಯಿಸಿದ್ದಾರೆ.







