ನೀವು ಮುಳುಗಿ ಅಥವಾ ಸಾಯಿರಿ, ಆದರೆ ಜನರ ಹಣ ವಾಪಸ್ ಕೊಡಿ : ರಿಯಲ್ ಎಸ್ಟೇಟ್ ಕಂಪೆನಿಗೆ ಸುಪ್ರೀಂ ಕೋರ್ಟ್
.jpg)
ಹೊಸದಿಲ್ಲಿ, ಸೆ.6: ರಿಯಲ್ ಎಸ್ಟೇಟ್ ದಿಗ್ಗಜ ‘ಸುಪರ್‌ಟೆಕ್’ನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ ‘‘ನೀವು ಮುಳುಗಿ ಇಲ್ಲ ಸಾಯಿರಿ, ಆ ಬಗ್ಗೆ ನಮಗೆ ಚಿಂತೆಯಿಲ್ಲ, ಆದರೆ ಹೂಡಿಕೆದಾರರ ಹಣವನ್ನು ಹಿಂತಿರುಗಿಸಿ’’ ಎಂದು ಕಟುವಾಗಿ ಹೇಳಿದೆ.
‘‘ನೀವು ಮುಳುಗಿ ಇಲ್ಲವೇ ಸಾಯಿರಿ, ಆದರ ಚಿಂತೆ ನಮಗಿಲ್ಲ. ಆದರೆ ಮನೆ ಖರೀದಿಯನ್ನು ಕೈಬಿಡಲು ನಿರ್ಧರಿಸಿರುವ ಗ್ರಾಹಕರ ಹಣವನ್ನು ಪಾವತಿಸಿ’’ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಎ.ಕೆ. ಗೋಯಲ್ ಅವರನ್ನೊಳಗೊಂಡ ನ್ಯಾಯಪೀಠವು ಸುಪರ್‌ಟೆಕ್‌ಗೆ ಆದೇಶಿಸಿತು. ಕಂಪೆನಿಯ ಪರ ವಾದಿಸಿದ ಹಿರಿಯ ನ್ಯಾಯವಾದಿ ರಾಜೀವ್ ಧವನ್ ಅವರು ನ್ಯಾಯಾಲಯವು ಬ್ಯಾಂಕರ್‌ನ ಪಾತ್ರವನ್ನು ವಹಿಸಬಾರದೆಂದು ಮನವಿ ಮಾಡಿದಾಗ ನ್ಯಾಯಪೀಠ ಹೀಗೆ ಪ್ರತಿಕ್ರಿಯಿಸಿತು.
ಸೂಪರ್‌ಟೆಕ್ ಸಂಸ್ಥೆಯು ಹೊಸದಿಲ್ಲಿ ಸಮೀಪದ ನೊಯ್ಡೆದಲ್ಲಿ ನಿರ್ಮಿಸುತ್ತಿರುವ ಅವಳಿ ವಸತಿ ಸಂಕೀರ್ಣದಲ್ಲಿ ಫ್ಲಾಟ್‌ಗಳ ಖರೀದಿಗಾಗಿ ಹಣ ಪಾವತಿಸಿದ್ದ 17 ಮಂದಿ ಗ್ರಾಹಕರು ಕಂಪೆನಿಯು ತಮ್ಮ ಹಣವನ್ನು ಮರುಪಾವತಿಸುವಂತೆ ಕೋರಿ ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದರು.
ಆದರೆ ಪ್ರಸ್ತುತ ರಿಯಲ್‌ಎಸ್ಟೇಟ್ ಉದ್ಯಮದಲ್ಲಿ ಹಿಂಜರಿತ ಉಂಟಾಗಿರುವ ಕಾರಣ, ತಾನು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದಾಗಿ ಸೂಪರ್‌ಟೆಕ್ ಸಂಸ್ಥೆಯು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು. ಈ ವಸತಿ ಸಂಕೀರ್ಣದಲ್ಲಿ ಹೂಡಿಕೆ ಮಾಡಿರುವ ಬಹುತೇಕ ಸದಸ್ಯರು ಸಂತೃಪ್ತರಾಗಿದ್ದಾರೆಂದು ಕಂಪೆನಿಯು ತಿಳಿಸಿದೆ. ತನ್ನಲ್ಲಿ ಹೂಡಿಕೆ ಮಾಡಿದ 628 ಮಂದಿಯ ಪೈಕಿ ಕೇವಲ 108 ಮಂದಿ ಹಣ ಮರುಪಾವತಿಸಲು ಬಯಸಿದ್ದರೆ, ಉಳಿದ 274 ಮಂದಿ ಕಂಪೆನಿಯ ಇತರೆಡೆ ನಿರ್ಮಿಸುತ್ತಿರುವ ವಸತಿಸಂಕೀರ್ಣಗಳಿಗೆ ಸ್ಥಳಾಂತರಗೊಳ್ಳಲು ಬಯದ್ದಾರೆ. ಕೇವಲ ನ್ಯಾಯಾಲಯದ ಆದೇಶದಂತೆ ಸಕಾಲದಲ್ಲಿ ಅರ್ಜಿ ಸಲ್ಲಿಸಿದವರೆಗೆ ಹಣವನ್ನು ಹಿಂತಿರುಗಿಸಲಾಗುವುದು ಎಂದು ಧವನ್ ನ್ಯಾಯಾಲಯಕ್ಕೆ ತಿಳಿಸಿದರು.
ಮರುಪಾವತಿಯನ್ನು ಕೋರುತ್ತಿರುವ 17 ಮಂದಿ ಅರ್ಜಿದಾರರಿಗೆ, ಅವರು ಹೂಡಿಕೆ ಮಾಡಿದ ಹಣದ ಶೇ.10ರಷ್ಟನ್ನು ಪ್ರತಿ ತಿಂಗಳೂ ಪಾವತಿಸಬೇಕೆಂದು ನ್ಯಾಯಪೀಠ ಸೂಪರ್‌ಟೆಕ್‌ಗ ತಿಳಿಸಿದೆ ಹಾಗೂ ಮುಂದಿನ ಆಲಿಕೆಯನ್ನು ಅಕ್ಟೋಬರ್ 25ಕ್ಕೆ ನಿಗದಿಪಡಿಸಿದೆ.





