ರುಯಿಯಾಗೆ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಂ
ಹೊಸದಿಲ್ಲಿ, ಸೆ.6: ಎಸ್ಸಾರ್ ಸಮೂಹದ ಪ್ರವರ್ತಕ ರವಿ ರುಯಿಯಾ ಅವರು ವಿದೇಶ ಪ್ರವಾಸಕ್ಕೆ ಅನುಮತಿಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯವು ‘ಕೆಟ್ಟ ಅನುಭವ’ವೊಂದನ್ನು ಉಲ್ಲೇಖಿಸಿ, ವಿದೇಶದಿಂದ ಮರಳಿ ಬರುವುದಾಗಿ ಭರವಸೆ ನೀಡಿದ್ದ ವ್ಯಕ್ತಿಯೋರ್ವ ತನ್ನ ಮಾತನ್ನು ಉಳಿಸಿಕೊಂಡಿರಲಿಲ್ಲ ಎಂದು ಹೇಳಿತು.
2002ರ 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣವೊಂದಲ್ಲಿ ರುಯಿಯಾ ಆರೋಪಿಯಾಗಿದ್ದಾರೆ. ತನ್ನ ಕಕ್ಷಿದಾರರಿಗೆ ಕೆನಡಾ,ಅಮೆರಿಕ ಮತ್ತು ಸೌದಿ ಅರೇಬಿಯಗಳಲ್ಲಿ ಉದ್ಯಮ ಹಿತಾಸಕ್ತಿಗಳಿರುವುದರಿಂದ ಅವರು ವಿದೇಶ ಪ್ರಯಾಣ ಮಾಡುವುದು ಅಗತ್ಯವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ ರುಯಿಯಾ ಪರ ವಕೀಲರು, ಅವರೆಂದೂ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂದು ವಾದಿಸಿದ್ದರು. ಆದರೆ ರುಯಿಯಾ ಮನವಿಗೆ ಆಕ್ಷೇಪವನ್ನು ವ್ಯಕ್ತಪಡಿಸಿದ ನ್ಯಾಯಾಲಯವು ಅವರಿಗೆ ವಿದೇಶಕ್ಕೆ ತೆರಳಲು ಅವಕಾಶ ನೀಡಿದರೆ ಅವರು ವಾಪಸಾಗದಿರಬಹುದು ಮತ್ತು ಅವರು ಅನಿವಾಸಿ ಭಾರತೀಯರಾಗಿರುವುದರಿಂದ ಅವರನ್ನು ಭಾರತಕ್ಕೆ ಮರಳಿ ಕರೆತರುವುದು ಕಷ್ಟವಾಗಬಹುದು ಎಂದು ಹೇಳಿತು.
ತನಿಖಾ ಸಂಸ್ಥೆಯ ವಾದಕ್ಕೆ ಮಣೆ ಹಾಕಿದಂತಿದ್ದ ನ್ಯಾಯಾಲಯವು,ನಮಗೆ ಈ ಹಿಂದೆ ಕೆಟ್ಟ ಅನುಭವವಾಗಿದೆ. ನಿಮ್ಮಂತಹ ವ್ಯಕ್ತಿಯೋರ್ವ ತಾನು ವಾಪಸ್ ಬರುವುದಾಗಿ ಹೇಳಿದ್ದ, ಆದರೆ ಅವನೆಂದೂ ಭಾರತಕ್ಕೆ ಮರಳಲಿಲ್ಲ ಎಂದು ಹೇಳಿತು. ಸದ್ಯ ಜಾಮೀನಿನಲ್ಲಿರುವ ರುಯಿಯಾ ಕಳೆದ ವರ್ಷ ರಷ್ಯಾ,ಬ್ರಿಟನ್ ಮತ್ತು ಫ್ರಾನ್ಸ್‌ಗೆ ತೆರಳಲು ನ್ಯಾಯಾಲಯವು ಅನುಮತಿ ನೀಡಿತ್ತು.





