ಶೈಕ್ಷಣಿಕ ಗುರಿಗಳನ್ನು ಸಾಧಿಸುವಲ್ಲಿ ಭಾರತ 50 ವರ್ಷಗಳಷ್ಟು ವಿಳಂಬ: ಯುನೆಸ್ಕೋ
ಹೊಸದಿಲ್ಲಿ, ಸೆ.6: ಪ್ರಚಲಿತ ಪ್ರವೃತ್ತಿಯನ್ನು ಪರಿಗಣಿಸಿದರೆ ಭಾರತವು ತನ್ನ ಜಾಗತಿಕ ಶೈಕ್ಷಣಿಕ ಬದ್ಧತೆಗಳನ್ನು ಪೂರೈಸುವಲ್ಲಿ 50ವರ್ಷಗಳಷ್ಟು ವಿಳಂಬವಾಗಲಿದೆ. 2030ರಲ್ಲಿ ತನ್ನ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಅದು ಬಯಸುತ್ತಿದ್ದರೆ ಅದು ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂದು ಯುನೆಸ್ಕೋದ ನೂತನ ಜಾಗತಿಕ ಶಿಕ್ಷಣ ನಿಗಾ ವರದಿಯು ಹೇಳಿದೆ.
ಪ್ರಸಕ್ತ ಪ್ರವೃತ್ತಿಯನ್ನು ಪರಿಗಣಿಸಿದರೆ ದಕ್ಷಿಣ ಏಷ್ಯಾದಲ್ಲಿ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು 2051ರಲ್ಲಿ, ಸಾರ್ವತ್ರಿಕ ಕೆಳಹಂತದ ಪ್ರೌಢ ಶಿಕ್ಷಣವನ್ನು 2062ರಲ್ಲಿ ಮತ್ತು ಸಾರ್ವತ್ರಿಕ ಮೇಲುಹಂತದ ಪ್ರೌಢ ಶಿಕ್ಷಣವನ್ನು 2087ರಲ್ಲಿ ಸಾಧಿಸಬಹುದಾಗಿದೆ ಎಂದು ವರದಿಯು ತಿಳಿಸಿದೆ.
ಭಾರತವು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು 2050ರಲ್ಲಿ, ಸಾರ್ವತ್ರಿಕ ಕೆಳಹಂತದ ಪ್ರೌಢ ಶಿಕ್ಷಣವನ್ನು 2060ರಲ್ಲಿ ಮತ್ತು ಸಾರ್ವತ್ರಿಕ ಮೇಲುಹಂತದ ಪ್ರೌಢ ಶಿಕ್ಷಣವನ್ನು 2085ರಲ್ಲಿ ಸಾಧಿಸಬಹುದಾಗಿದೆ ಎಂದು ವರದಿಯು ತಿಳಿಸಿದೆ. ಇದು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ 2030ರ ಗಡುವನ್ನು 50 ವರ್ಷಗಳಷ್ಟು ವಿಳಂಬಗೊಳಿಸಲಿದೆ ಎಂದು ವರದಿಯು ಹೇಳಿದೆ.





