ಕಾಸರಗೋಡು: ವಲಸೆ ಕಾರ್ಮಿಕರಿಗೆ ಇಲ್ಲ ಭದ್ರತೆ
ಕಾಸರಗೋಡು, ಸೆ.6: ಕರ್ನಾಟಕ ಸೇರಿದಂತೆ ಹೊರರಾಜ್ಯದಿಂದ ಜಿಲ್ಲೆಗೆ ಆಗಮಿಸಿ ದುಡಿಯುತ್ತಿರುವ ವಲಸೆ ಕಾರ್ಮಿಕರು ಇದೀಗ ಭಯದ ವಾತಾವರಣದಲ್ಲಿ ಬದುಕಬೇಕಾಗಿದೆ.ಬರಗಾಲ ಹಾಗೂ ಇನ್ನಿತರ ಕಾರಣಗಳಿಂದ ಹೊರರಾಜ್ಯದಿಂದ ಬರುವ ವಲಸೆ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ.
ಹಗಲು ಕೂಲಿ ಕೆಲಸ ಮಾಡಿ, ರಾತ್ರಿ ಅಂಗಡಿ ಜಗಲಿ, ಬಸ್ಸುನಿಲ್ದಾಣ ಮೊದಲಾದೆಡೆ ವಿಶ್ರಾಂತಿ ಪಡೆಯುವ ಇವರನ್ನು ಬೆದರಿಸಿ ದೋಚುವ ತಂಡವು ಇದೀಗ ಸಕ್ರಿಯವಾಗಿದೆ. ಹೊರರಾಜ್ಯದವರಾದುದರಿಂದ ಹೆದರಿ ಯಾವುದೇ ಪ್ರತಿರೋಧ ಒಡ್ಡಲು, ಪೊಲೀಸರಿಗೆ ದೂರು ನೀಡಲು ಅವರು ಮುಂದಾಗುವುದಿಲ್ಲ ಎಂಬ ಅರಿವಿದ್ದೇ ಈ ತಂಡವು ಹೊರರಾಜ್ಯದ ಕಾರ್ಮಿಕರನ್ನು ಗುರುತಿಸಿ ಹಫ್ತಾ ವಸೂಲಿಯಲ್ಲಿ ತೊಡಗಿದೆ. ಅಲ್ಲದೆ ವಿರೋಧಿಸಿದ್ದಲ್ಲಿ ಕೊಲೆಗೈಯ್ಯಲು ಸಹ ತಂಡ ಹಿಂಜರಿಯಲಾರದು ಎಂಬುದು ಎರಡು ದಿನಗಳ ಹಿಂದೆ ಕಾಸರಗೋಡಿನ ಅಂಗಡಿ ಜಗಲಿಯಲ್ಲಿ ಮಲಗಿದ್ದ ಕೊಪ್ಪಳದ ಶರಣಪ್ಪರನ್ನು ಮಣಿ ಎಂಬಾತ ಕಲ್ಲಿನಿಂದ ಜಜ್ಜಿ ಕೊಲೆಗೈದ ದಾರುಣ ಘಟನೆ ಸಾಕ್ಷಿಯಾಗಿದೆ.
ಈ ಹಿಂದೆಯೂ ಹಲವಾರು ಮಂದಿಯನ್ನು ತಂಡವು ಬೆದರಿಸಿ, ಹಲ್ಲೆ ನಡೆಸಿ ಹಣ ದೋಚಿದೆ. ಇದರಿಂದಾಗಿ ದೂರದೂರಿನಿಂದ ಬಂದು ದುಡಿಯುವ ಹೊರರಾಜ್ಯದ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಇವರಿಗೆ ಸೂಕ್ತ ರಕ್ಷಣೆ ನೀಡಬೇಕಾದುದು ಅಗತ್ಯ ಎಂಬ ಒತ್ತಾಯ ಕೇಳಿಬರುತ್ತಿದೆ.





