ನರೇಶ್ ಶೆಣೈ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಪ್ರಕರಣ
ಬೆಂಗಳೂರು, ಸೆ.6: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಪ್ರಕರಣದ ಆರೋಪಿ ನಮೋ ಬ್ರಿಗೇಡ್ ಮುಖಂಡ ಹಾಗೂ ಉದ್ಯಮಿ ನರೇಶ್ ಶೆಣೈ ಜಾಮೀನು ಕೋರಿ ಹೈಕೋಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸೇಗೌಡ ಅವರಿದ್ದ ನ್ಯಾಯಪೀಠ, ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ, ಅರ್ಜಿದಾರ ನರೇಶ್ ಶೆಣೈ ವಿರುದ್ಧ ನೇರವಾದ ಯಾವುದೇ ಆರೋಪಗಳಿಲ್ಲ. ಇತರೆ ಆರೋಪಿಗಳ ಹೇಳಿಕೆ ಪರಿಗಣಿಸಿ ಇವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಮಂಗಳೂರಿನಲ್ಲಿ ಬೃಹತ್ ಮಟ್ಟದ ವ್ಯವಹಾರ ನಡೆಸುತ್ತಿರುವ ಇವರು ಗೌರವಯುತ ಕುಟುಂಬದಿಂದ ಬಂದಿದ್ದಾರೆ. ಅಲ್ಲದೆ, ಈ ಹಿಂದೆ ಇವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಮೃತ ವಿನಾಯಕ ಬಾಳಿಗ ಮತ್ತು ಅರ್ಜಿದಾರರ ಶೆಣೈ ನಡುವೆ ಯಾವುದೇ ವೈಮನಸ್ಸು ಇರಲಿಲ್ಲ. ಅಲ್ಲದೆ, ಪ್ರಕರಣದ ತನಿಖೆ ಪೂರ್ಣಗೊಂಡಿದ್ದು ವಿಚಾರಣೆ ಹಂತದಲ್ಲಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಪೀಠ್ಕಕೆ ಮನವಿ ಮಾಡಿದರು.
ಅರ್ಜಿ ದಾರರ ಪರ ವಕೀಲರ ವಾದ ಪೂರ್ಣಗೊಂಡಿದ್ದು, ಸರಕಾರದ ವಾದವನ್ನು ಸೆ.7ರಂದು ಆಲಿಸುವುದಾಗಿ ತಿಳಿಸಿದ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದರು.





