ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ
ಬಕ್ರೀದ್ ಆಚರಣೆಗೆ ಅಡಚಣೆ ಬೇಡ

ಬೆಂಗಳೂರು, ಸೆ.6: ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಮ್ ಬಾಂಧವರಿಗೆ ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇ ಶಕ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್.ರೋಷನ್‌ಬೇಗ್ ನೇತೃತ್ವದಲ್ಲಿ ಮುಸ್ಲಿಮ್ ಧಾರ್ಮಿಕ ಮುಖಂಡರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಈ ನಿರ್ದೇಶನ ನೀಡಿದ್ದಾರೆ.
ಬಕ್ರೀದ್ ಅಂಗವಾಗಿ ಕುರ್ಬಾನಿಗಾಗಿ ಖರೀದಿಸಿ ತರುತ್ತಿರುವ ಜಾನುವಾರುಗಳನ್ನು ಪ್ರಾಣಿದಯಾ ಸಂಘದ ಸದಸ್ಯರೊಂದಿಗೆ ಸೇರಿ ಹಿಡಿಯುವ ಪೊಲೀಸರು, ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಅಮಾಯಕ ಯುವಕರಿಗೆ ಕಿರುಕುಳ ನೀಡುತ್ತಿರುವುದನ್ನು ತಪ್ಪಿಸುವಂತೆ ಮುಖ್ಯಮಂತ್ರಿಗೆ ಧಾರ್ಮಿಕ ಮುಖಂಡರು ಮನವಿ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ ಮುಖ್ಯಮಂತ್ರಿ, ಪೊಲೀಸ್ ಕರ್ತವ್ಯದಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿದಯಾ ಸಂಘದ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದೆಂದು ಕಟ್ಟಪ್ಪಣೆ ಮಾಡಿದರು.
ಮುಖ್ಯಮಂತ್ರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಷನ್‌ಬೇಗ್, ಬಕ್ರೀದ್ ಸಂದರ್ಭದಲ್ಲಿ ಪ್ರತೀ ಬಾರಿಯೂ ಜಾನುವಾರುಗಳನ್ನು ಹಿಡಿಯುವುದು ಹಾಗೂ ಅಮಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ಪುನರಾವರ್ತನೆಯಾಗುತ್ತಿದೆ ಎಂದರು.
ಪ್ರಾಣಿ ದಯಾ ಸಂಘದವರೊಂದಿಗೆ ಸ್ಥಳೀಯ ಪೊಲೀಸರು ಸೇರಿಕೊಂಡು ಅಮಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಅಟ್ಟುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.
ಧಾರ್ಮಿಕ ಮುಖಂಡರ ನಿಯೋಗದಲ್ಲಿ ವೌಲಾನ ಮುಹಮ್ಮದ್ ಹನೀಫ್ ಅಫ್ಸರ್ ಅಝೀಝಿ, ವೌಲಾನ ಸೈಯದ್ ಶಬ್ಬೀರ್‌ಅಹ್ಮದ್ ನದ್ವಿ, ಮಹಮ್ಮದೀಯರ ಕನ್ನಡ ವೇದಿಕೆಯ ಅಧ್ಯಕ್ಷ ಸಮೀವುಲ್ಲಾಖಾನ್, ಅಂಜುಮನ್ ಎ ಖುದ್ದಾಮುಲ್ ಮುಸ್ಲಿಮೀನ್‌ನ ಮುಖಂಡ ನಸೀಮ್ ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







