ಸರಕಾರವನ್ನು ಟೀಕಿಸಿದ್ದಕ್ಕಾಗಿ ದೇಶದ್ರೋಹ, ಮಾನಹಾನಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ
ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ
ಹೊಸದಿಲ್ಲಿ,ಸೆ.6: :ಸರಕಾರವನ್ನು ಟೀಕಿಸಿದ್ದಕ್ಕಾಗಿ ಯಾರ ಮೇಲೂ ದೇಶದ್ರೋಹ ಅಥವಾ ಮಾನಹಾನಿ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಇಂದು ಸ್ಪಷ್ಟ ಸಂದೇಶವೊಂದನ್ನು ನೀಡಿದೆ.
‘‘ಸರಕಾರವನ್ನು ಟೀಕಿಸುವಂತಹ ಹೇಳಿಕೆಯನ್ನು ಯಾರಾದರೂ ನೀಡಿದಲ್ಲಿ, ಅವರ ವಿರುದ್ಧ ದೇಶದ್ರೋಹ ಅಥವಾ ಮಾನಹಾನಿ ಕಾನೂನಡಿ ಅಪರಾಧ ಪ್ರಕರಣವನ್ನು ದಾಖಲಿಸಲಾಗದು’’ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ಎನ್‌ಜಿಓ ಸಂಸ್ಥೆಯೊಂದರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ದೇಶದ್ರೋಹವು ಒಂದು ಗಂಭೀರ ಅಪರಾಧವಾಗಿದೆ. ಆದರೆ ಸರಕಾರವು ತನ್ನ ವಿರುದ್ಧದ ಭಿನ್ನಮತವನ್ನು ಹೊಸಕಿ ಹಾಕಲು ಈ ಕಾನೂನನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆಯೆಂದು ಅವರು ದೂರಿದರು.
ಕೂಡಂಕುಳಂ ಅಣು ವಿದ್ಯುತ್ ಯೋಜ ನೆಯ ವಿರುದ್ಧ ಪ್ರತಿಭಟನೆ ನಡೆಸಿದವರು ಹಾಗೂ ವ್ಯಂಗ್ಯಚಿತ್ರಕಾರ ಅಸೀಮ್ ತ್ರಿವೇದಿಯ ವಿರುದ್ಧ ದೇಶದ್ರೋಹದ ಆರೋಪಗಳನ್ನು ಅವರು ಈ ಸಂದರ್ಭದಲ್ಲಿ ಉದಾಹರಣೆಯಾಗಿ ನೀಡಿದರು.
ಪ್ರಶಾಂತ್ ಭೂಷಣ್ ಅವರ ವಾದವನ್ನು ಆಲಿಸಿ ನ್ಯಾಯಪೀಠವು, ‘‘ನಾವು ದೇಶದ್ರೋಹ ಕಾನೂನಿನ ಬಗ್ಗೆ ವಿವರಿಸಬೇಕಾಗಿಲ್ಲ. ಕೇದರ್‌ನಾಥ್ ಸಿಂಗ್ ವರ್ಸಸ್ ಬಿಹಾರ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಪಂಚ ಸದಸ್ಯ ನ್ಯಾಯಪೀಠವೊಂದು ನೀಡಿದ 1962ರಲ್ಲಿ ನೀಡಿದ್ದ ತೀರ್ಪಿನಲ್ಲಿ ಈ ಬಗ್ಗೆ ವಿವರಿಸಲಾಗಿದೆಯೆಂದರು.
ದೇಶದ್ರೋಹ ಕಾನೂನಿನ ದುರ್ಬಳಕೆ ಯಾಗುತ್ತಿದೆಯೆಂದು ಆರೋಪಿಸಿ, ‘ಕಾಮನ್ ಕಾಸ್’ (ಸಮಾನಧ್ಯೇಯ) ಎಂಬ ಎನ್‌ಜಿಓ ಸಂಸ್ಥೆಯು ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆದಾಗ್ಯೂ ಅರ್ಜಿಗೆ ಸಂಬಂಧಿಸಿ ನಿರ್ದೇಶನವೊಂದನ್ನು ನೀಡಲು ನ್ಯಾಯಾಲಯ ನಿರಾಕರಿಸಿತು. ಈ ಆದೇಶದ ಪ್ರತಿಯನ್ನು ರಾಜ್ಯ ಸರಕಾರದ ಎಲ್ಲಾ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿ ಕೊಡಲಾಗುವುದೆಂದು ಅದು ತಿಳಿಸಿತು.





