ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿಕೊಟ್ಟ 8 ಮುಸ್ಲಿಂ ಯುವಕರು

ಮುಂಬೈ,ಸೆ.7: ಥಾಣೆ ಜಿಲ್ಲೆಯ ಕೌಸಾ ಗ್ರಾಮದಲ್ಲಿ ಇತ್ತೀಚೆಗೆ ನಡುರಾತ್ರಿಯಲ್ಲಿ ಮೃತಪಟ್ಟ ಹಿಂದೂ ವ್ಯಕ್ತಿಯೊಬ್ಬನ ಅಂತ್ಯಕ್ರಿಯೆ ನಡೆಸಿಕೊಟ್ಟ ಎಂಟು ಮುಸ್ಲಿಂ ಯುವಕರು ಮತೀಯ ಸಾಮರಸ್ಯದ ಸಂಕೇತವಾಗಿ ಹೊರಹೊಮ್ಮಿ ಅಸಹಿಷ್ಣುತೆಯ ಹಲವು ಘಟನೆಗಳಿಂದ ತತ್ತರಿಸಿರುವ ದೇಶದಲ್ಲಿ ಬೆಳ್ಳಿ ಚುಕ್ಕೆಗಳಾಗಿ ಮೂಡಿದ್ದಾರೆ.
65 ವರ್ಷದ ವಮನ್ ಕದಮ್ ಇತ್ತೀಚೆಗೆ ಮೃತಪಟ್ಟಾಗ ಆತನ ಅಂತ್ಯಕ್ರಿಯೆ ನಡೆಸಲು ಆತನ ಪತ್ನಿಯಲ್ಲದೆ ಬೇರಾರೂ ಇರಲಿಲ್ಲ. ಇದನ್ನು ತಿಳಿದು ಸಹಾಯಕ್ಕೆ ಧಾವಿಸಿದ ಮುಂಬ್ರಾದ ಎಂಟು ಮಂದಿ ಮುಸ್ಲಿಂ ಯುವಕರು ತಾವು ಕದಮ್ ಅವರ ಅಂತ್ಯಕ್ರಿಯೆ ನೆರವೇರಿಸುವುದಾಗಿ ಹೇಳಿ ಅದಕ್ಕೆ ಅಗತ್ಯವಿರುವ ಹಗ್ಗ, ಮಡಿಕೆ, ಬಿದಿರಿನ ಕೋಲು, ಅಗರಬತ್ತಿ, ಬಟ್ಟೆ ಹಾಗೂ ಚಾಪೆಯನ್ನು ಖರೀದಿಸಿ ನಂತರ ಕದಮ್ ಅವರ ಮೃತದೇಹವನ್ನು ತಮ್ಮ ಹೆಗಲಲ್ಲಿ ಹೊತ್ತು ರುದ್ರಭೂಮಿಗೆ ತೆರಳಿ ಮುಂಜಾನೆ 3 ಗಂಟೆ ಸುಮಾರಿಗೆ ಹಿಂದೂ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿಸಿದರು.
ಈ ಯುವಕರ ಮಾನವೀಯತೆಯನ್ನು ಕೊಂಡಾಡಿ, ಮುಂಬ್ರಾ-ಕಲ್ವಾ ಶಾಸಕ ಜಿತೇಂದ್ರ ಅವ್ಹದ್ ತಮ್ಮ ಫೇಸ್ ಬುಕ್ ಪುಟದಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ‘‘ದ್ವೇಷ ಕೆಲಸ ಮಾಡುವುದಿಲ್ಲ. ಮುಂಬ್ರಾದಲ್ಲಿ ಸಹೋದರತೆ ಸಾರುವ ಘಟನೆಗಳು ಪ್ರತಿ ನಿತ್ಯ ನಡೆಯುತ್ತದೆ,’’ ಎಂದು ಅವರು ಬರೆದಿದ್ದಾರೆ. ಮುಂಬ್ರಾ ಮುಸ್ಲಿಂ ಬಾಹುಳ್ಯ ಪ್ರದೇಶವೆಂಬುದನ್ನು ಇಲ್ಲಿ ಸ್ಮರಿಸಬಹುದು.
ಈ ಅಪರೂಪದ ಕೈಂಕರ್ಯ ನಡೆಸಿದ ಮುಸ್ಲಿಂ ಯುವಕರನ್ನು ಖಲೀಲ್ ಪಾವ್ನೆ, ಫಹದ್ ದಾಬಿರ್, ನವಾರ್ ದಾಬಿರ್, ರಾಹಿಲ್ ದಾಬಿರ್, ಶಬಾನ್ ಖಾನ್, ಮಕ್ಸೂದ್ ಖಾನ್, ಫಾರೂಕ್ ಖಾನ್ ಹಾಗೂ ಮುಹಮ್ಮದ್ ಕಸಮ್ ಶೇಖ್ ಎಂದು ಗುರುತಿಸಲಾಗಿದೆ.







