ಭಾರತದ ಮಹಿಳಾ ಕ್ರಿಕೆಟ್‌ನ ಮಾಜಿ ನಾಯಕಿ ಅಂಜುಮ್ ಚೋಪ್ರಾಗೆ ಎಂಸಿಸಿ ಆಜೀವ ಸದಸ್ಯತ್ವ

ಹೊಸದಿಲ್ಲಿ, ಸೆ.7: ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾಗೆ ಮ್ಯಾರಿಲ್‌ಬಾನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಗೌರವ ಆಜೀವ ಸದಸ್ಯತ್ವ ನೀಡಿ ಗೌರವಿಸಿದೆ.
ಅಂಜುಮ್ ಪ್ರತಿಷ್ಠಿತ ಎಂಸಿಸಿ ಆಜೀವ ಸದಸ್ಯತ್ವ ಪಡೆದ ಭಾರತದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
39ರ ಹರೆಯದ ಅಂಜುಮ್ ಭಾರತದ ಪರ 12 ಟೆಸ್ಟ್, 127 ಏಕದಿನ ಹಾಗೂ 18 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕು ಅರ್ಧಶತಕಗಳಿರುವ 548 ರನ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಂದು ಶತಕ ಹಾಗೂ 18 ಅರ್ಧಶತಕಗಳ ಸಹಿತ 2,856 ರನ್ ಗಳಿಸಿದ್ದಾರೆ.
‘‘ಇದು ನನ್ನ ಪಾಲಿಗೆ ಮಹಾಗೌರವ. ಎಂಸಿಸಿ ಗೌರವ ಆಜೀವ ಸದಸ್ಯತ್ವ ಸ್ವೀಕರಿಸಲು ಬಯಸುತ್ತೀರಾ ಎಂದು ಲಾರ್ಡ್ಸ್ ಕಚೇರಿಯಿಂದ 2 ತಿಂಗಳ ಹಿಂದೆ ನನಗೆ ಇ-ಮೇಲ್ ಬಂದಿತ್ತು. ನಾನು ಪ್ರತಿಕ್ರಿಯೆ ಪತ್ರ ಕಳುಹಿಸಿದ ಅವರು ಸ್ವೀಕೃತಿ ಪತ್ರವನ್ನು ಕಳುಹಿಸಿಕೊಟ್ಟಿದ್ದರು. ಎರಡು ದಿನಗಳ ಹಿಂದೆ ಎಂಸಿಸಿ ಆಜೀವ ಸದಸ್ಯತ್ವ ಪಟ್ಟಿಯಲ್ಲಿ ಝಹೀರ್ ಖಾನ್ ಹೆಸರು ನೋಡಿದ್ದೆ. ಅದರಲ್ಲಿ ನನ್ನ ಹೆಸರೂ ಇತ್ತು’’ಎಂದು ವಿವಿಧ ಟಿವಿ ಚಾನಲ್‌ಗಳಲ್ಲಿ ಕ್ರಿಕೆಟ್ ವಿಮರ್ಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಚೋಪ್ರಾ ಹೇಳಿದ್ದಾರೆ.
‘‘ಎಂಸಿಸಿ ಗೌರವ ಸದಸ್ಯತ್ವ ಪಡೆದಿರುವ ಸುನೀಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್‌ರಂತಹ ಭಾರತೀಯ ಕ್ರಿಕೆಟ್ ದಂತಕತೆಗಳೊಂದಿಗೆ ನನ್ನ ಹೆಸರು ಇರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಚೋಪ್ರಾ ಹೇಳಿದ್ದಾರೆ.







