ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ
ಕೆಆರ್‌ಎಸ್ ಡ್ಯಾಂ ಸುತ್ತಮುತ್ತ ಬಿಗಿ ಬಂದೋಬಸ್ತ್

ಮಂಡ್ಯ, ಸೆ.7: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗಿರುವ ರಾಜ್ಯ ಸರಕಾರ ರೈತರು, ಪ್ರತಿಪಕ್ಷಗಳು, ವಿವಿಧ ಕನ್ನಡಪರ ಸಂಘಟನೆಗಳ ಪ್ರತಿಭಟನೆಯ ನಡುವೆಯೂ ರಾಜ್ಯದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳಿಂದ ಬುಧವಾರ ನೀರು ಬಿಡುಗಡೆ ಮಾಡಿದೆ.
ಮೈಸೂರಿನ ಎಚ್‌ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ 4,000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯದಿಂದ 11,000 ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದೆ.
ರೈತರು ಕೆಆರ್‌ಎಸ್ ಡ್ಯಾಂಗೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಡ್ಯಾಂನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.11 ಕೆಎಸ್‌ಆರ್‌ಪಿ ತುಕಡಿ, 100ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಡಬಲ್ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ಇದೇ ವೇಳೆ, ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ಜಲಾಶಯದಿಂದಲೂ 4,900 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ.





