ಗಣೇಶನ ಬದಲು ಪೊಲೀಸನ್ನೇ ವಿಸರ್ಜಿಸಲು ಯತ್ನಿಸಿದ ಗುಂಪು !

ಮುಂಬೈ, ಸೆ.7: ಗಣೇಶ ವಿಗ್ರಹ ವಿಸರ್ಜನೆಯ ವೇಳೆ ಯುವಕರ ಗುಂಪೊಂದು ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದಲ್ಲದೆ, ಅವರನ್ನು ಕೊಳವೊಂದರಲ್ಲಿ ಮುಳುಗಿಸಿ ಹಲ್ಲೆ ನಡೆಸಿದ ಘಟನೆ ಕಲ್ಯಾಣ್ ನಗರದಲ್ಲಿ ಮಂಗಳವಾರ ನಡೆದಿದೆ.
ಪೊಲೀಸ್‌ಗೆ ಹಲ್ಲೆ ನಡೆಸುತ್ತಿರುವ ಮೊಬೈಲ್ ದೃಶ್ಯ ವೈರಲ್ ಆಗಿದೆ. ಮುಂಬೈನಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ ನಡೆಸಿದ ವಾರದ ಬಳಿಕ ಈ ಘಟನೆ ನಡೆದಿದೆ.
ಗಣೇಶ ವಿಸರ್ಜನೆಯ ಕೊಳದ ಬಳಿ ಪೊಲೀಸ್ ಸಮವಸ್ತ್ರ ಧರಿಸಿದ್ದ ನಿತಿನ್ ದೊಗಾಡೆ ಮೇಲೆ ಕೆಲವು ಯುವಕರ ಗುಂಪು ದಾಳಿ ನಡೆಸಿದೆ. ಕೊಳದಲ್ಲಿ ಮುಳುಗಿಸಲು ಯತ್ನಿಸಿದ ಯುವಕರಿಂದ ತಪ್ಪಿಸಿಕೊಂಡು ಹೊರ ಬಂದ ದೊಗಾಡೆ ಮೇಲೆ ಮತ್ತೆ ಮೂವರು ಯುವಕರು ಹಲ್ಲೆ ನಡೆಸಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ದೊಗಾಡೆ ಕೈಯ್ಯಲ್ಲಿ ಕೋಲನ್ನು ಹಿಡಿದುಕೊಂಡು ಜನರ ಮಧ್ಯೆಯಲ್ಲಿದ್ದ ಸ್ವಯಂಸೇವಕರನ್ನು ನಿಯಂತ್ರಿಸುತ್ತಿದ್ದಾಗ ಯುವಕನೊಬ್ಬ ದೊಗಾಡೆಯನ್ನು ಕೊಳಕ್ಕೆ ನೂಕಿ ಥಳಿಸಲಾರಂಭಿಸಿದ್ದ.
ಯುವಕರ ಗುಂಪಿನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಆದರೆ, ಈ ತನಕ ಯಾರೊಬ್ಬರನ್ನೂ ಬಂಧಿಸಲಾಗಿಲ್ಲ.
ಮುಂಬೈನಲ್ಲಿ ಇತ್ತೀಚೆಗಿನ ದಿನಗಳಲ್ಲಿ ಪೊಲೀಸರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಕಳೆದ 2 ವಾರಗಳಲ್ಲಿ 7 ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ರಾಜ್ಯ ಸರಕಾರ ಟೀಕೆಗಳನ್ನು ಎದುರಿಸುತ್ತಿದೆ. ಕಳೆದ ತಿಂಗಳು ಟ್ರಾಫಿಕ್ ಕಾನ್ಸ್‌ಟೇಬಲ್ ವಿಲಾಸ್ ಶಿಂಧೆ ಬೈಕ್ ಸವಾರನಿಂದ ತೀವ್ರ ಸ್ವರೂಪದ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಹೆಲ್ಮೆಟ್ ಧರಿಸಿಲ್ಲ ವೇಕೆ ಎಂದು ಕೇಳಿದ್ದಕ್ಕೆ ಬೈಕ್ ಸವಾರ ಶಿಂಧೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ.







